ರಾಷ್ಟ್ರೀಯ ಧರ್ಮಸಂಸದ್​­ಗೆ ಅದ್ದೂರಿ ಚಾಲನೆ

ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ನಡೆಯುತ್ತಿರುವ ರಾಷ್ಟ್ರೀಯ ಧರ್ಮಸಂಸದ್​­ಗೆ ಅದ್ದೂರಿ ಚಾಲನೆ ದೊರೆತಿದೆ. ‘ಧರ್ಮ ಸಂಸದ್’ ಉದ್ಘಾಟನೆಗೂ ಮುನ್ನಾ ವೈಭವದ ಶೋಭಯಾತ್ರೆ ನಡೆಯಿತು. ಈ ಬೃಹತ್ ಮೆರವಣಿಗೆಯಲ್ಲಿ ಸಾಧುಸಂತರು, ಯತಿವರ್ಯರು, ಮಹಾಮಂಡಲೇಶ್ವರರು, ಧರ್ಮ ಪೀಠಾಧೀಶ್ವರರು ಸೇರಿದಂತೆ ಸಾವಿರಾರು ಮಂದಿ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಹರಿದ್ವಾರದಿಂದ ಆಗಮಿಸಿದ್ದ ನೂರಾರು ನಾಗಾ ಸಾಧುಗಳು ಈ ಧಾರ್ಮಿಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದರು.

ಹಿಂದೂ ಧರ್ಮ ಅಂದ್ರೆ; ಜೀವನ ರೀತಿ, ಜೀವನ ಪ್ರೀತಿ!
ಆ ಬಳಿಕ ರಾಷ್ಟ್ರೀಯ ಧರ್ಮ ಸಂಸದ್­ನ್ನು ಹರಿದ್ವಾರದ ಜುನಾ ಅಖಾಡದ ಮಹಾಮಂಡಲೇಶ್ವರ ಮಹಾಂತ ದಯಾನಂದ ಸರಸ್ವತಿ ಸೋಮವಾರ ಉದ್ಘಾಟಿಸಿದರು.

ವೀರೇಂದ್ರ ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವಿಧ ಮಠಗಳ ಸ್ವಾಮೀಜಿಗಳು, ಹಲವು ಅಖಾಡಗಳ ಮಹಾಂತರು, ನಾಥ ಪಂಥದ ಸ್ವಾಮೀಜಿಗಳು, ನಾಗಾ ಸಾಧುಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಾಧು, ಸಂತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೃಹತ್ ಧಾರ್ಮಿಕ ಕಾರ್ಯಕ್ರಮ
ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಕ್ಷೇತ್ರಗಳ ಮಹಾಮಂಡಲೇಶ್ವರರು ಸಾಧು ಸಂತರು ನಾಗಾ ಸಾಧುಗಳು ಹಾಗೂ ಹಠಯೋಗಿಗಳು. ಅಘೋರಿಗಳು ಸೇರಿದಂತೆ ನಾಥ ಪಂಥ ಹಾಗೂ ಸೀತಾರಾಮ ಪರಂಪರೆಯ ಬಹುತೇಕ ಸಾಧುಗಳು ಹೀಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಂತರು ಭಾಗವಹಿಸಿದ್ದು ಇಡೀ ಕನ್ಯಾಡಿ ರಾಮ ಮಂದಿರವೇ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿತ್ತು.

2 ಸಾವಿರಕ್ಕೂ ಅಧಿಕ ಸಾಧು ಸಂತರು ಭಾಗಿ
ನೇಪಾಳ, ಬದರಿ, ಕೇದಾರ, ಗಂಗೋತ್ರಿ, ನೇಮಿಶಾರಣ್ಯ, ಚಿತ್ರಕೂಟ, ಉಜ್ಜಯಿನಿ, ಅಲಹಾಬಾದ್, ನಾಸಿಕ್, ರಾಮೇಶ್ವರ, ಅಸ್ಸಾಂ, ಕೇರಳ, ತಮಿಳುನಾಡು ಸೇರಿದಂತೆ ದೇಶ ವಿವಿಧ ಭಾಗಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಸಾಧು ಸಂತರು ಈ ಧರ್ಮ ಸಂಸದ್­ನಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಎಲ್ಲಾ ಅಖಾಡಗಳು
ರಾಷ್ಟ್ರಮಟ್ಟದಲ್ಲಿ ಎಲ್ಲಾ ಅಖಾಡಗಳು, ನಾಗಾ ಸಾಧುಗಳು, ಸೀತಾರಾಮ ಪರಂಪರೆ, ನಾಥ ಪಂಥ, ತ್ಯಾಗಿ, ಬೈರಾಗಿ ಇತ್ಯಾದಿ ಸನಾತನ ಹಿಂದು ಧರ್ಮದ ಪರಂಪರೆಗಳ ಆಚಾರ್ಯರನ್ನು, ಮಹಾಂತರನ್ನು ಒಟ್ಟು ಗೂಡಿಸಿ ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್ ಸ್ಥಾಪಿಸುವ ಗುರಿ ಈ ಸಂಸದ್ ಮೂಲಕ ಹೊಂದಲಾಗಿದೆ.

ಲೋಕ ಕಲ್ಯಾಣದ ಬಗ್ಗೆ ನಿರ್ಣಯ
ದೇಶದಲ್ಲಿ ಮುಂದಿನ 10 ವರ್ಷದೊಳಗೆ ಪ್ರತಿ ಹಳ್ಳಿಗಳಲ್ಲಿ ಗುರುಕುಲ ಮಾದರಿ ಅಂಗನವಾಡಿ ವಿದ್ಯಾಸಂಸ್ಥೆಯ ಸ್ಥಾಪನೆ, ಪ್ರಾಥಮಿಕ ಶಾಲೆಯಿಂದ ಕಾಲೇಜು ತನಕ ಪಠ್ಯಗಳಲ್ಲಿ ದೇಶದ ನೈಜ್ಯ ಇತಿಹಾಸ, ಪರಂಪರೆ, ಶ್ರೇಷ್ಠ ಮಾನವ ಧರ್ಮ, ಸನಾತನ ಹಿಂದು ಧರ್ಮದ ಮಹತ್ವಗಳನ್ನು ಸೇರ್ಪಡೆಗೊಳಿಸುವುದು. ತೀರ್ಥ ಕ್ಷೇತ್ರ ತಿರುಗಾಡುವ ಸಂತರು, ವಯೋವೃದ್ಧ ಸಂತರ ಜೀವನಕ್ಕೆ ಭದ್ರತೆ ಒದಗಿಸಿ ಇವರ ಸಮಸ್ಯೆಗಳನ್ನು ಪರಿಹರಿಸುವುದು. ಲೋಕ ಕಲ್ಯಾಣ ಮಂಚ್ ಸಭೆ ಕಾಲಕ್ಕೆ, ವಿಷಯಕ್ಕೆ ಅನುಸಾರವಾಗಿ ವರ್ಷಕ್ಕೆ ಮೂರು ಬಾರಿ ನಡೆದು ಲೋಕ ಕಲ್ಯಾಣದ ಬಗ್ಗೆ ನಿರ್ಣಯ ಕೈಗೊಳ್ಳಲಿದೆ.