ಕ್ಷೇತ್ರ ಇತಿಹಾಸದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ದೇವರು ವನವಾಸ ಕಾಲದಲ್ಲಿ ಪಂಚವಟಿಯನ್ನು ತೊರೆದು ಲಕ್ಷ್ಮಣ ಸಮೇತರಾಗಿ ಸೀತಾನ್ವೇಷಣೆಯನ್ನು ಮಾಡುತ್ತಾ ದಕ್ಷಿಣ ದಿಕ್ಕಿಗೆ ತಮ್ಮ ಪ್ರಯಾಣವನ್ನು ಬೆಳೆಸುತ್ತಾರೆ. ಅನೇಕ ಪುಣ್ಯ ಕ್ಷೇತ್ರಗಳನ್ನು ದರ್ಶನ ಮಾಡುತ್ತಾ ಈಗ ಶ್ರೀರಾಮ ಕ್ಷೇತ್ರವಿರುವ ಭೂಭಾಗಕ್ಕೆ ಬಂದಾಗ ಇದೊಂದು ಪುರಾತನ ತಪೋಭೂಮಿ ಎಂಬುದನ್ನು ಶ್ರೀರಾಮ ದೇವರು ತಮ್ಮ ದಿವ್ಯಜ್ಞಾನದಿಂದ ತಿಳಿದು ಇದೇ ಪ್ರದೇಶದಲ್ಲಿ ಒಂದು ದಿವಸ ವಿಶ್ರಮಿಸಿದರು. ಶ್ರೀರಾಮ ದೇವರು ಇಲ್ಲಿ ಪಾದಾರ್ಪಣೆ ಮಾಡುವ ಮೊದಲೇ ಇದೊಂದು ಋಷಿ-ಮುನಿಗಳ ತಪೋಭೂಮಿಯಾದ್ದರಿಂದ, ಅದರಿಂದಾಗಿ ಆಕರ್ಷಣೆಗೊಂಡ ಶ್ರೀರಾಮ ದೇವರು ಈ ಪ್ರದೇಶದಲ್ಲಿ ಪಾದಾರ್ಪಣೆಗೈದು ಇಲ್ಲಿ ತನ್ನ ಅನುಷ್ಠಾನವನ್ನು ಮಾಡಿ ಈ ಭೂಮಿಯನ್ನು ಇನ್ನಷ್ಟು ಪಾವನಗೊಳಿಸಿದರು.
1927 ರಲ್ಲಿ ಮುಂಬೈಯ ವಜ್ರೇಶ್ವರಿಯ ಭಗವಾನ್ ನಿತ್ಯಾನಂದರು ದೇಶ ಸಂಚಾರ ಮಾಡುತ್ತಾ ಪರಮ ಪವಿತ್ರ ಕ್ಷೇತ್ರಗಳಲ್ಲೊಂದಾದ ಧರ್ಮಸ್ಥಳ ಕ್ಷೇತ್ರಕ್ಕೆ ಮಂಜುನಾಥ ಸ್ವಾಮಿ ದರ್ಶನಕ್ಕೆ ಬಂದಾಗ ಹಿಂದಿರುಗಿ ಹೋಗುವವರು ಒಂದು ದಿವಸ ಈಗ ರಾಮಕ್ಷೇತ್ರವಿರುವ ಅಂದಿನ ದಿನದಲ್ಲಿ ಬರೀ ಕಾಡು ಪ್ರದೇಶವಾಗಿದ್ದ ಈ ಪುಣ್ಯಭೂಮಿಯಲ್ಲಿ ತಂಗಿದ್ದರು. ಆ ಹೊತ್ತಿನಲ್ಲಿ ಕೆಲವು ಭಕ್ತರು ಅವರ ದರ್ಶನ ಪಡೆದುಕೊಂಡಿದ್ದರು. ಆಗ ಅವರು ಭಕ್ತರನ್ನು ಉದ್ದೇಶಿಸಿ, “ಇದೊಂದು ಜಾಗೃತ ಭೂಮಿ, ಭವಿಷ್ಯದಲ್ಲಿ ವಿಶ್ವಮಾನ್ಯವಾಗುವ, ಪುಣ್ಯಕ್ಷೇತ್ರವಾಗುವ ಎಲ್ಲಾ ಲಕ್ಷಣಗಳನ್ನು ಪಡೆದುಕೊಂಡಿದೆ. ಇದನ್ನು ಕಾರ್ಯರೂಪಕ್ಕೆ ತರಬಲ್ಲ ಪುಣ್ಯ ಪುರುಷನೊಬ್ಬನು ಇಲ್ಲಿ ನೆಲೆಗೊಳ್ಳಬೇಕಾಗಿದೆ” ಎಂದು ಸೂಚಿಸಿದರು. ತ್ರಿಕಾಲ ಜ್ಞಾನಿಗಳಾದ ಅವರ ದಿವ್ಯದೃಷ್ಠಿಗೆ ಆಗಲೇ ಎಲ್ಲವೂ ಗೋಚರವಾಗಿತ್ತು.
ನಿತ್ಯಾನಂದಸ್ವಾಮಿಗಳು ತರುವಾಯದ ಕಾಲದಲ್ಲಿ ಮುಂಬಯಿ ಮಹಾನಗರದ ಗಣೇಶಪುರಿಯೆಂಬಲ್ಲಿ ಹಲವು ವರ್ಷಗಳು ನೆಲೆಸಿದ್ದರು. 1937 ರ ಸುಮಾರಿನಲ್ಲಿ ಆತ್ಮಾನಂದ ಸರಸ್ವತಿಗಳಿಗೆ ಆ ಮಹಾತ್ಮರ ಸಂಸರ್ಗವಾಯಿತು. ಆತ್ಮಾನಂದರು ಅವರ ಶಿಷ್ಯರಾಗಿ ಅವರ ಸೇವೆ ಮಾಡುತ್ತಾ ಸುಮಾರು 15 ವರ್ಷಗಳನ್ನು ಕಳೆದರು. ತಮ್ಮ ಭಕ್ತಿಜ್ಞಾನ ವೈರಾಗ್ಯಗಳನ್ನು ಆ ಗುರುಸನ್ನಿಧಿಯಲ್ಲಿ ಗಟ್ಟಿಗೊಳಿಸಿಕೊಂಡರು. ನಿತ್ಯಾನಂದ ಸ್ವಾಮಿಗಳಿಗೆ ಕೂಡಾ ಈ ಶಿಷ್ಯರ ಮೇಲೆ ಪ್ರೀತಿ ವಿಶ್ವಾಸಗಳು ಅಪಾರವಾಗಿ ಬೆಳೆದವು. ಒಂದು ರಾತ್ರಿ ತಂಗಿದ್ದ ಧರ್ಮಸ್ಥಳದ ಸನಿಹದ ಜಾಗೃತಭೂಮಿಯನ್ನು ಅವರು ಮರೆತಿರಲಿಲ್ಲ. ‘ಅದನ್ನು ಭಕ್ತಿಕೇಂದ್ರವಾಗಿ
ಮೇಲೆತ್ತಲು ಈ ಆತ್ಮಾನಂದನೇ ಸರಿ’ ಎಂದು ಅವರು ನಿಶ್ಚಯಿಸಿಕೊಂಡರು.
“ಅದೊಂದು ಪುಣ್ಯ ಭೂಮಿ, ಅಲ್ಲಿ ಶ್ರೀ ರಾಮನಿಗೊಂದು ದೇವಾಲಯವಾಗಬೇಕು. ಅದನ್ನು ನೆರವೇರಿಸುತ್ತೀರೆಂಬ ವಿಶ್ವಾಸ ನನಗಿದೆ. ನನ್ನ ಆಶೀರ್ವಾದವೂ ನಿನಗಿದೆ. ಅದೇ ನಿನ್ನ ಕಾರ್ಯಕ್ಷೇತ್ರವಾಗಲಿ” ಎಂದು ಹೇಳುತ್ತ ಆತ್ಮಾನಂದರನ್ನು ಆ ಸತ್ಕಾರ್ಯಕ್ಕೆ ಪ್ರೇರೇಪಿಸಿದರು. ಗುರುವಿನ ಅನುಗ್ರಹದಿಂದ ಶ್ರೀ ರಾಮಭಕ್ತಿಯನ್ನು ಮೈಗೂಡಿಸಿಕೊಂಡು ರಾಮಮಯರಾಗಿದ್ದ ಆತ್ಮಾನಂದರು ಆ ಸದ್ಗುರುವಿನ ಆಜ್ಞೆಯನ್ನು ಅನುಸರಿಸಿ ಭರತಕಂಡದ ಪುಣ್ಯತೀರ್ಥಗಳ ಯಾತ್ರೆಯನ್ನು ಕೈಗೊಂಡರು. ಹರಿದ್ವಾರ, ಹೃಷಿಕೇಶ, ಬದರಿ, ಕೇದಾರ, ಅಮರನಾಥ, ಗಂಗೋತ್ರಿ, ಯಮುನೋತ್ರಿ, ಕೈಲಾಸಮಾನಸ ಸರೋವರ, ನೇಪಾಳದ ಪಶುಪತಿನಾಥ, ವೈಷ್ಣೋದೇವಿ ಮುಂತಾದ ಪಾವನಧಾಮಗಳನ್ನು ಸಂದರ್ಶಿಸಿ ದಿವ್ಯಾನುಭವ ಸಂಪನ್ನರಾದರು. ಕಾಲ್ನಡಿಗೆಯಲ್ಲಿಯೇ ಅದೆಷ್ಟೋ ಸಾವಿರ ಸಾವಿರ ಮೈಲಿಗಳನ್ನು ಸವೆಸಿದರು, ದಕ್ಷಿಣ ಭಾರತದ ಪುಣ್ಯತೀರ್ಥಗಳಂತೂ ಅವರ ಪಾಲಿಗೆ ಕರತಲಾಮಲಕವಾದುವು. ಯಾತ್ರಾಕಾಲದಲ್ಲಿ ಉಂಟಾದ ವಿಘ್ನಗಳನ್ನೆಲ್ಲ, ಕಷ್ಟನಷ್ಟಗಳನ್ನೆಲ್ಲ ಶಾಂತಭಾವದಿಂದ ಸಹಿಸಿಕೊಂಡರು.
ಶ್ರೀ ಜನಾನಂದ ಸ್ವಾಮಿಗಳಿಂದ ಸನ್ಯಾಸ ದೀಕ್ಷೆ
ನಿತ್ಯಾನಂದ ಸ್ವಾಮಿಗಳು ಬ್ರಹ್ಮೈಕ್ಯರಾದಾಗ ಆತ್ಮಾನಂದ ಸರಸ್ವತಿಗಳು ಸದ್ಗುರುವನ್ನು ಕಳೆದುಕೊಂಡ ವೇದನೆಯಿಂದ ಪರಿತಾಪಪಟ್ಟರು. ಅವರ ಅಂತ್ಯಕ್ರಿಯೆಗಳನ್ನು ನೆರವೇರಿಸಿ, ಅವರ ಸಮಾಧಿಯನ್ನು ರೂಪಿಸುವಲ್ಲಿ ಆತ್ಮಾನಂದ ಸರಸ್ವತಿಗಳು ಪ್ರಮುಖ ಪಾತ್ರ ವಹಿಸಿದರು, ಅಲ್ಲಿಂದತ್ತ ನಿತ್ಯಾನಂದ ಸ್ವಾಮಿಗಳ ಭಕ್ತಪರಂಪರೆಗೆ ಸೇರಿದ ಶಂಕರಾನಂದತೀರ್ಥರು, ದಯಾನಂದ ಸಾಲಿಗ್ರಾಮ ಸ್ವಾಮಿಗಳು, ಕೇರಳದ ಕಾಙಂಗಾಡು ಜನಾನಂದ ಸ್ವಾಮಿಗಳು, ಕಾಙಂಗಾಡು ಕೊಟ್ಟ ಸ್ವಾಮಿ ಅವಧೂತರು ಮುಂತಾದ ಪುಣ್ಯ ಪುರುಷರ ಸತ್ಸಂಗ ಆತ್ಮಾನಂದ ಸರಸ್ವತಿಗಳಿಗೆ ಲಭ್ಯವಾಯಿತು. ಆ ಯೋಗವರ್ಯರ ಆಶೀರ್ವಾದದ ಫಲವಾಗಿ ಅವರು ಆತ್ಮಸಿದ್ಧಿಯ ಶಿಖರವನ್ನೇರಿದರು. ಜನಾನಂದಸ್ವಾಮಿಗಳಿಂದಲೇ ಆತ್ಮಾನಂದ ಸರಸ್ವತಿಗಳು ಶಾಸ್ತ್ರೋಕ್ತವಾದ ಬಗೆಯಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡರು. ಶಂಕರಾನಂದತೀರ್ಥರೇ ಮೊದಲಾದ ಮೇಲೆ ಹೇಳಿದ ಪುಣ್ಯ ಪುರುಷರ ಅಂತ್ಯಕಾಲದಲ್ಲಿ ಅವರೊಡನಿದ್ದು, ಅವರ ಸೇವೆ ಮಾಡಿ, ಅವರು ದೇಹತ್ಯಾಗ ಮಾಡಿದ ಮೇಲೆ, ಅವರ ಅಂತ್ಯಕ್ರಿಯೆಗಳನ್ನು ಮಾಡಿ, ಸಮಾಧಿಗಳನ್ನು ನಿರ್ಮಿಸುವಲ್ಲಿ ಆತ್ಮಾನಂದ ಸರಸ್ವತಿಗಳಿಗೆ ಪ್ರಮುಖಪಾತ್ರ ಲಭ್ಯವಾಗಿತ್ತು. ಅವೆಲ್ಲವೂ ಅವರ ಆಧ್ಯಾತ್ಮಿಕ ಜೀವನದ ಸುವರ್ಣ ಮುಹೂರ್ತಗಳಾಗಿದ್ದುವು.
ನಿತ್ಯಾನಂದ ಸ್ವಾಮಿಗಳು, ಬ್ರಹ್ಮೈಕ್ಯರಾದ ಮೇಲೆ ಆತ್ಮಾನಂದ ಸರಸ್ವತಿ ಸ್ವಾಮಿಗಳು ಕೆಲವು ವರ್ಷಗಳ ಕಾಲ ಕಾಙಂಗಾಡಿನಲ್ಲಿ ನೆಲೆಸಿದರು. ಅಲ್ಲಿ ತಮ್ಮ ಗುರುಸ್ಮರಣೆ ಶಾಶ್ವತವಾಗಿ ನಿಲ್ಲುವ ಕಾರ್ಯಗಳನ್ನು ನೆರೆವೇರಿಸಿದರು. ಸ್ವಾಮಿ ನಿತ್ಯಾನಂದಮಂದಿರ, ಗುರುವನನಿತ್ಯಾನಂದಮಂದಿರ ಎಂಬೆರಡು ಗುಡಿಗಳನ್ನು ದಾನಿಗಳಾದ ಸದ್ಭಕ್ತರ ನೆರವಿನಿಂದ ನಿರ್ಮಿಸಿದರು. ‘ ಸ್ವಾಮಿ ನಿತ್ಯಾನಂದ ವಿದ್ಯಾ ಕೇಂದ್ರ’ ಎಂಬ ಸಂಸ್ಥೆಯೊಂದನ್ನು ರೂಪಿಸಿ, ಅದರ ಆಶ್ರಯದಲ್ಲಿ ಕೆಲವು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದರು. ಒಂದು ಪಾಲಿಟೆಕ್ನಿಕ್ ಕೂಡ ತಲೆಯೆತ್ತಿತು. ಅವೆಲ್ಲವೂ ಈಗ ಅಲ್ಲಿ ಅಭಿವೃದ್ಧಿ ಪಥದಲ್ಲಿವೆ.
ಕನ್ನಡನಾಡಿಗೆ ಆಗಮನ
ಆತ್ಮಾನಂದ ಸರಸ್ವತಿಸ್ವಾಮಿಗಳು ಅನನ್ಯ ವಿದ್ಯಾ ಪ್ರೇಮಿಗಳು. ವಿದ್ಯಾವಂತರಾದವರು ತಾವು ಕೈಗೊಂಡ ಕಾರ್ಯವನ್ನು ಅವಿದ್ಯಾವಂತರಿಗಿಂತ ಹೆಚ್ಚು ಯಶಸ್ವಿಯಾಗಿ ಮಾಡುವುದು ಸಾಧ್ಯ ಎಂಬುದು ಅವರ ಅನುಭವ. ಕಾಙಂಗಾಡಿನಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ, ತಾವೇ ಕೆಲವು ತರಗತಿಗಳಿಗೆ ಹೋಗಿ, ಪಾಠ ಹೇಳುವ ಸಂದರ್ಭಗಳು ಒದಗಿಬಂದಾಗ, ಅಲ್ಲಿನ ಆಡಳಿತ ನಿರ್ವಹಣೆಯಲ್ಲಿ ಪಾಲ್ಗೊಳ್ಳುವ ಸನ್ನಿವೇಶಗಳು ಎದುರಾದಾಗ, “ನಾನು ಇನ್ನಷ್ಟು ಆಧುನಿಕ ವಿದ್ಯೆ ಕಲಿತಿದ್ದರೆ ಉಪಯೋಗಕ್ಕೆ ಬರುತ್ತಿತ್ತು” ಎಂದು ಭಾವಿಸಿ ಕೊಳ್ಳುತ್ತಿದ್ದರು. ಹಿಂದುಳಿದ ವರ್ಗಗಳ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಸಂಕಲ್ಪ ಮೊದಲಿನಿಂದಲೂ ಅವರ ಹೃದಯದಲ್ಲಿ ಇದ್ದೇ ಇತ್ತು. ಕಾಙಂಗಾಡಿನ ವಿದ್ಯಾ ಸಂಸ್ಥೆಗಳನ್ನು ಅವುಗಳ ಪಾಡಿಗೆ ಬೆಳೆಯಲು ಬಿಟ್ಟು, ಗುರುವಿನ ಆಜ್ಞೆಯನ್ನು ನೆನೆದು ಕನ್ನಡ ನಾಡಿನತ್ತ ನಡೆದು ಬಂದರು.
ಆತ್ಮಾನಂದ ಸರಸ್ವತಿ ಸ್ವಾಮಿಗಳು 1969 ರ ನವೆಂಬರ್ ತಿಂಗಳಿನ ವೇಳೆಗೆ ಧರ್ಮಸ್ಥಳದ ಕನ್ಯಾಡಿಗೆ ಆಗಮಿಸಿ, ರಾಮಭಕ್ತಿಯ ಪ್ರಚಾರಕ್ಕೆ ಮತ್ತು ವಿದ್ಯಾ ಪ್ರಚಾರಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡರು. ‘ಶ್ರೀ ರಾಮಭಗವಾನ್ ನಿತ್ಯಾನಂದ ಮಂದಿರ’ ಎಂಬ ಹೆಸರಿನಲ್ಲಿ ಪುಟ್ಟದೊಂದು ರಾಮ ದೇವಾಲಯವನ್ನು ನಿರ್ಮಿಸಿದರು. ಅಲ್ಲಿ ಶ್ರೀ ರಾಮಸೀತಾ ಲಕ್ಷ್ಮಣ ಹನುಮಂತರ ಕಲಾತ್ಮಕ ಅಮೃತ ಶಿಲೆಯ ಮೂರ್ತಿಗಳನ್ನು ಗುಡಿಯ ಅಂಚಿಗೇ ಸ್ಥಾಪಿಸಿದರು. ಗರ್ಭಗೃಹದಲ್ಲಿ ಸದ್ಗುರು ನಿತ್ಯಾನಂದಸ್ವಾಮಿಗಳು ನಿಂತ ನಿಲುವಿನ ವಿಶಿಷ್ಟವಾದೊಂದು ಭಂಗಿಯ ಆಳೆತ್ತರದ ಪಂಚಲೋಹದ ಪ್ರತಿಮೆಯನ್ನು ನೆಲೆಗೊಳಿಸಿದರು. ಅದರಿಂದ ರಾಮಭಕ್ತಿಯ ಪ್ರಚಾರಕ್ಕೆ ಇಂಬು ದೊರೆಯಿತು. ಭಕ್ತವೃಂದವು ದಿನದಿಂದ ದಿನಕ್ಕೆ ಬೆಳೆಯಿತು.
ಹೀಗೆ ಭಕ್ತಿ ಪ್ರಚಾರಕ್ಕೆ ಇಂಬು ದೊರೆಯಲು ಆತ್ಮಾನಂದ ಸರಸ್ವತಿಗಳ ಅನನ್ಯ ರಾಮ ಭಕ್ತಿಯೇ ಕಾರಣ. ನಿತ್ಯವೂ ರಾಮ ಭಜನೆಯಲ್ಲಿ ತನ್ಮಯರಾಗುತ್ತಿದ್ದ ಅವರು ವಾರ್ಷಿಕವಾಗಿ ಶ್ರೀ ರಾಮ ನವಮಿಯ ಪರ್ವಕಾಲದಲ್ಲಿ, ರಾಮನವಮಿಗಿಂತ ಏಳು ದಿವಸಗಳ ಮುಂಚೆ ಭಜನೆ ಪ್ರಾರಂಭಿಸಿ ಆಹೋ ರಾತ್ರಿಯಾಗಿ “ಶ್ರೀರಾಮ ಜಯರಾಮ ಜಯ ಜಯ ರಾಮ” ಎಂಬ ರಾಮ ತಾರಕ ಮಂತ್ರದ ಸಪ್ತಾಹವನ್ನು ವಿಜೃಂಭಣೆಯಿಂದ ನಡೆಸುತ್ತಿದ್ದರು. ಅವರು ರಾಮೈಕ್ಯರಾದ ತರುವಾಯ ಈ ಭಜನಾ ಸಪ್ತಾಹದ 50 ನೇ ವರ್ಷದ ನೆನಪಿಗಾಗಿ 20100 ರಲ್ಲಿ ಶ್ರೀರಾಮ ತಾರಕ ಮಂತ್ರದ ಲೇಖನ ಯಜ್ಞವನ್ನು ಬಹಳ ಅದ್ಧೂರಿಯಿಂದ ಕ್ಷೇತ್ರದಲ್ಲಿ ಈಗಿನ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಸಲಾಯಿತು. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಬಂದು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು. ಶ್ರೀ ರಾಮ ಕ್ಷೇತ್ರದಲ್ಲಿ ಇಂದಿನವರೆಗೆ ನೆರೆವೇರಿರುವ ಎಲ್ಲಾ ಸತ್ಕಾರ್ಯಗಳಿಗೂ ಆ ಶ್ರೀ ರಾಮ ತಾರಕ ಮಂತ್ರದ ಸಪ್ತಾಹವೇ ಮೂಲ ಶಕ್ತಿ ಆಗಿದೆಯೆಂದರೆ ಅತಿಶಯೋಕ್ತಿಯಲ್ಲ.
1980 ರಲ್ಲಿ ಕನ್ಯಾಡಿಗೆ ಸುಮಾರು 4 ಕಿ. ಮೀ. ದೂರವಾಗುವ, ಕಲ್ಮಂಜ ಎಂಬ ಗ್ರಾಮಕ್ಕೆ ಸೇರಿದ ದೇವರಗುಡ್ಡೆ ಎಂಬಲ್ಲಿ ಒಂದಷ್ಟು ಭೂಮಿಯನ್ನು ಪಡೆದುಕೊಂಡು ‘ಗುರುದೇವ ಆಶ್ರಮ’ ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ಕೇಂದ್ರವೊಂದನ್ನು ಕಟ್ಟಿದರು. ಕಾಲಕಾಲಕ್ಕೆ ಅಲ್ಲಿನ ಕಾರ್ಯಚಟುವಟಿಕೆಗಳು ವಿಸ್ತಾರಗೊಂಡುವು. ದೇವಲಿಂಗೇಶ್ವರ ಎಂಬ ಹೆಸರಿನಲ್ಲಿ ಶಿವನಿಗೊಂದು ಆಲಯದ ನಿರ್ಮಾಣವಾಯಿತು. ಅದರ ನಿತ್ಯ ಪೂಜೆಗೆ ತಕ್ಕ ಏರ್ಪಾಡುಗಳನ್ನು ಮಾಡಿದರು. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಅಲ್ಲಿಯೇ ‘ಗುರುದೇವ ಅನಾಥಾಶ್ರಮವೊಂದನ್ನು ರೂಪುಗೊಳಿಸಿದರು.
ಶ್ರೀಗಳವರ ಸಮಾಧಿಯ ತರುವಾಯ ಪೀಠಕ್ಕೆ ಬಂದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು M.A, L.L.B., ಪದವೀಧರರಾಗಿದ್ದು ಮಾನವನ ಸರ್ವತೋಮುಖವಾದ ಅಭಿವೃದ್ಧಿಗೆ ಭಾರತೀಯ ಋಷಿ ಪರಂಪರೆ ಹಾಕಿಕೊಟ್ಟ ಗುರುಕುಲ ಮಾದರಿಯ ಶಿಕ್ಷಣ, ಸಂಸ್ಕಾರವೆಂಬುದನ್ನು ಮನಗಂಡು ಆತ್ಮಾನಂದ ಸರಸ್ವತಿ ವಿದ್ಯಾಲಯ ಎಂಬ ವಿದ್ಯಾಸಂಸ್ಥೆಯನ್ನು ಬೃಹತ್ ರೀತಿಯಲ್ಲಿ ಬೆಳೆಸುತ್ತಿದ್ದಾರೆ. ಆ ಸಂಸ್ಥೆಯಲ್ಲಿ L.K.G. – U.K.G. ಯಿಂದ 10 ನೇ ತರಗತಿಯವರೆಗೆ ಸುಮಾರು 450 ಮಕ್ಕಳು ವಿದ್ಯಾಭ್ಯಾಸವನ್ನು ಇಂಗ್ಲೀಷ್ ಮೀಡಿಯಮ್‌ನಲ್ಲಿ ಪಡೆಯುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಬಟ್ಟೆಬರೆ, ಪುಸ್ತಕ, ವೈದ್ಯಕೀಯ ಸೌಲಭ್ಯ, ವಸತಿ ಸೌಲಭ್ಯ ಎಲ್ಲವನ್ನೂ ಉಚಿತವಾಗಿ ನೀಡಲಾಗಿದೆ. ರಾಜ್ಯದ ಎಲ್ಲಾ ಜಾತಿ, ಜನಾಂಗದ ಅತಿ ಬಡವ ಮಕ್ಕಳ ಸುಧಾರಣಾ ದೃಷ್ಠಿಯಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೇಯೇ ರಾಜ್ಯದ ಬೇರೆ-ಬೇರೆ ಭಾಗಗಳಿಂದ ಬಂದ ಎಲ್ಲಾ ಜನಾಂಗದ ಮಕ್ಕಳಿಗೂ ವೇದಾಧ್ಯಯನದ ಉಚಿತವಾದ ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿ ಯಜುರ್ವೇದ-ಪಾಂಚರಾತ್ರಾಗಮ, ವಾಸ್ತುಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರಗಳನ್ನು ಬೋಧಿಸಲಾಗುತ್ತಿದೆ.
ಶ್ರೀ ರಾಮಚಂದ್ರ ದೇವರ ಕೃಪೆಯಿಂದ, ಭಗವನ್ ಶ್ರೀ ನಿತ್ಯಾನಂದರ ಆಶೀರ್ವಾದದಿಂದ, ಶ್ರೀ ಶ್ರೀ ಶ್ರೀ ಆತ್ಮಾನಂದ ಸ್ವಾಮಿಯವರ ತಪಸ್ಸಿನ ಫಲವಾಗಿ ಶ್ರೀ ರಾಮಕ್ಷೇತ್ರ ನಿರ್ಮಾಣಕ್ಕೆ ಬೇಕಾದ ಸನ್ನಿವೇಶಗಳು ತನ್ನಿಂತಾನೇ ನಿರ್ಮಾಣಗೊಳ್ಳತೊಡಗಿದವು.
ಸಹೃದಯ ಸ್ಪಂದನ
‘ಶ್ರೀ ರಾಮಕ್ಷೇತ್ರಕ್ಕೆ ಭಕ್ತಾದಿಗಳ ಆಗಮನ, ಸ್ಪಂದನ ಹೇಗಿದೆ’ ಎಂಬ ಪ್ರಶ್ನೆಗೆ ಆತ್ಮಾನಂದ ಸರಸ್ವತಿಗಳು ನೀಡಿರುವ ಉತ್ತಮ ಮನನಯೋಗ್ಯವಾಗಿದೆ: “ಶ್ರೀ ರಾಮ ಕ್ಷೇತ್ರಕ್ಕೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಎಲ್ಲೆಡೆಗಳಿಂದ ಪ್ರತಿನಿತ್ಯ ಸಹಸ್ರಾರು ಭಕ್ತಾದಿಗಳು ಭೇಟಿ ನೀಡಿ, ದೇವದೇವತೆಯರ ದರ್ಶನಗೈದು ಕ್ಷೇತ್ರದ ಪಾರಮ್ಯಕ್ಕೆ ಮನಸೋಲುತ್ತಿದ್ದಾರೆ. ಭಕ್ತಾದಿಗಳು ಭಾರತದಲ್ಲಿ ಇದೊಂದು ಉತ್ಕೃಷ್ಟ ಶ್ರೀ ರಾಮಕ್ಷೇತ್ರವೆಂದು ಮುಕ್ತ ಕಂಠದಿಂದ ಕೊಂಡಾಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳೂ ಶ್ರೀ ರಾಮಕ್ಷೇತ್ರವನ್ನು ಸಂದರ್ಶಿಸಿ, ಧನ್ಯತೆಯಿಂದ ಮರಳುತ್ತಿದ್ದಾರೆ. ಅದೇ ಅವರಿಗೆ ಮಾನಸಿಕ ಶಾಂತಿ, ನೆಮ್ಮದಿ ನೀಡುವ ದಿವ್ಯತಾಣವೆಂದು ನಂಬಿದ್ದಾರೆ”
“ಶ್ರೀ ರಾಮಕ್ಷೇತ್ರದ ಕೆಲಸಕಾರ್ಯಗಳಿನ್ನೂ ಪೂರ್ಣಗೊಂಡಿಲ್ಲ. ಶ್ರೀ ರಾಮನ ಪ್ರೇರಣೆಯಂತೆ ಇನ್ನೂ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಇಲ್ಲಿ ನಾನೆಂಬುದು ಯಾವುದೂ ಇಲ್ಲ. ನಾನು ಏನನ್ನೂ ಮಾಡಿಲ್ಲ. ಶ್ರೀ ರಾಮಭಕ್ತರಿಂದಲೇ ಕ್ಷೇತ್ರನಿರ್ಮಾಣವಾಗಿದೆ. ಅದನ್ನು ಮುನ್ನಡೆಸುವವರೂ ಭಕ್ತರೇ. ಅವರ ನಿರಂತರ ಶ್ರಮದಿಂದಲೇ ಕ್ಷೇತ್ರ ನಡೆಯುತ್ತದೆ, ಬೆಳೆದು ಬೆಳಗುತ್ತದೆ.”
ಕ್ಷೇತ್ರಾಭಿವೃದ್ಧಿಯ ಕಾರ್ಯಗಳು
ರಾಮದೇವಾಲಯದ ನಿರ್ಮಾಣಕ್ಕೆ 1978 ರಲ್ಲಿ ಬೆಂಗಳೂರಿನ ಶ್ರೀ ಬಾಲ ಶಿವಯೋಗಿ ಮಹಾರಾಜರು ಶಂಕುಸ್ಥಾಪನೆ ನೆರೆವೇರಿಸಿದ್ದರು. ಆ ಸುಮುಹೂರ್ತದಿಂದಲೂ ನಿರ್ಮಾಣಕಾರ್ಯವು ಸತತವಾಗಿ ನಡೆಯುತ್ತಲೇ ಬಂದಿದ್ದು, ಅದರೊಡನೆ ಬೇರೆ ಬೇರೆ ದೈವ ಸನ್ನಿಧಾನಗಳು ಎದ್ದು ನಿಂತಿವೆ. ಪುರಾತನ ಕಾಲದಲ್ಲಿ ಅಲ್ಲೊಂದು ನಾಗಬನವಿದ್ದು, ನಾಗಾರಾಧನೆ ನಡೆಯುತ್ತಿತ್ತು. ರಕ್ತೇಶ್ವರಿಯೆಂಬ ದೈವಕ್ಕೂ ಸ್ಥಾನವಿದ್ದು ಅದರ ನೇಮಾದಿ ಆಚರಣೆಗಳು ಜಾರಿಯಲ್ಲಿದ್ದುವು. ಆದರೆ ಕಾಲಗತಿಯಲ್ಲಿ ಅವೆಲ್ಲವೂ ಅರಣ್ಯದಲ್ಲಿ ಮರೆಯಾಗಿಬಿಟ್ಟವು. ಅವುಗಳ ಪ್ರಾಚೀನ ಇತಿಹಾಸವನ್ನೆಲ್ಲ ಶೋಧಿಸಿ ತಿಳಿದುಕೊಂಡ ಆತ್ಮಾನಂದಗುರುಗಳು 2003 ರಲ್ಲಿ ನಾಗನಗುಡಿ ಮತ್ತು ರಕ್ತೇಶ್ವರಿ ಗುಡಿಗಳನ್ನು ನೂತನವಾಗಿ ನಿರ್ಮಿಸಿ, ಅವುಗಳಿಗೆ ನೆರವೇರಬೇಕಾದ ಪೂಜಾಕಾರ್ಯಗಳನ್ನು ವ್ಯವಸ್ಥೆಗೊಳಿಸಿದರು. ಆಗ ನಾಗದೇವರಿಗೆ ಸಂಬಂಧಿಸಿದಂತೆ ಅತ್ಯುನ್ನತವಾದ ‘ನಾಗಮಂಡಲ’ವೆಂಬ ನಾಗಾರಾಧನೆಯನ್ನು ಅದ್ಭುತವಾಗಿ ನಡೆಸಿದರು. ಅದೇ ವರ್ಷದಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ಕಾಶೀಮಠಾಧೀಶರಾದ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀ ರಾಮದೇವರ ಮತ್ತು ಕ್ಷೇತ್ರಪಾಲ ಗಣಪತಿ ದೇವರ ಪ್ರಾಣಪ್ರತಿಷ್ಠಾ ಕಾರ್ಯಗಳನ್ನು ಸಂಪನ್ನಗೊಳಿಸಿದರು.
ಶ್ರೀ ರಾಮದೇವಾಲಯದ ಇತಿಹಾಸದಲ್ಲಿ 2007 ಎಂಬುದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ವರ್ಷ. ಆಗ ‘ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ’ಗಳು ‘ನ ಭೂತೋ ನ ಭವಿಷ್ಯತಿ’ ಎಂಬಂತೆ ನಡೆದುವು. ಅದು 54 ದಿನಗಳಷ್ಟು ದೀರ್ಘಕಾಲ ನಡೆದ ಸಮಾರಂಭವಾಗಿತ್ತು. 36 ಶಿಲಾಮಯ ಗರ್ಭಗುಡಿಗಳ ಮೂರ್ತಿಗಳಿಗೆ ‘ಪ್ರಾಣಪ್ರತಿಷ್ಠೆ’ಯೂ ಆಗ ನಡೆಯಿತು. ನವಗ್ರಹವನವೆಂಬ ಪ್ರತ್ಯೇಕವಾದ ಪೂಜಾಸ್ಥಾನವೂ ಆಗ ಉದ್ಘಾಟನೆಗೊಂಡಿತು. ಅಹೋರಾತ್ರಿ ‘ಶ್ರೀ ರಾಮನಾಮತಾರಕ ಮಂತ್ರೋಚ್ಛಾರಣೆ’ ಮತ್ತು ದೈವಗಳಿಗೆ ನೇಮೋತ್ಸವವೂ ಆಗ ಜರಗಿತು.
ದೇವಾಲಯದ ದರ್ಶನಕ್ಕೆಂದು ದೂರದೂರದಿಂದ ನಿತ್ಯವೂ ಭಕ್ತರು ರಾಮ ಕ್ಷೇತ್ರಕ್ಕೆ ಆಗಮಿಸುತ್ತಲೇ ಇರುತ್ತಾರೆ. ಅವರ ವಸತಿ, ಭೋಜನಾದಿಗಳ ವ್ಯವಸ್ಥೆಗಾಗಿ
ಸನಿಹದಲ್ಲಿಯೇ ಅತ್ಯಂತ ಭವ್ಯವಾದ ನಾಲ್ಕು ಅಂತಸ್ತುಗಳ ‘ಅನ್ನಪೂರ್ಣೇಶ್ವರಿ’ ಅನ್ನಛತ್ರ ನಿರ್ಮಾಣಗೊಂಡಿರುತ್ತದೆ. ಈಗ ಇಲ್ಲಿ ನಿತ್ಯ ನಿರಂತರ ಅನ್ನದಾಸೋಹ ನಡೆಯುತ್ತಿದೆ.
ರಥತ್ರಯಗಳ ದಿವ್ಯಧಾಮ
2007 ರಲ್ಲಿಯೇ ಮೂರು ಕಲಾತ್ಮಕವಾದ ತೇರುಗಳು ರಾಮಕ್ಷೇತ್ರದ ವೈಭವವನ್ನು ಹೆಚ್ಚಿಸಿವೆ. ಅದಲ್ಲದೆ, ಚಂದ್ರಮಂಡಲ ಮತ್ತು ಪುಷ್ಪರಥವೆಂಬ ಇನ್ನೆರಡು ರಥಗಳು ನಿರ್ಮಾಣವಾಗಿ ಈಗ ಒಟ್ಟು 5 ರಥಗಳು ಕ್ಷೇತ್ರದಲ್ಲಿವೆ. ಶ್ರೀ ರಾಮದೇವರ ಪರಿವಾರಕ್ಕೆ 72 ಅಡಿ ಎತ್ತರದ ಬ್ರಹ್ಮರಥವು ಕಡೆಯಲ್ಪಟ್ಟಿದೆ. ಆಂಜನೇಯಸ್ವಾಮಿಗೆ ಪ್ರತ್ಯೇಕವಾದ 36 ಅಡಿ ಎತ್ತರದ ಹನುಮಾನ್‌ರಥವು ರೂಪುಗೊಂಡಿದೆ. ಅವೆರಡಕ್ಕೂ ಕಿರೀಟಪ್ರಾಯವಾಗುವಂತೆ 18 ಅಡಿ ಎತ್ತರದ ಬೆಳ್ಳಿಯ ರಥವೊಂದು ಹೊಳೆಹೊಳೆದು ಎದ್ದುನಿಂತಿದೆ. ಬ್ರಹ್ಮರಥ ಮತ್ತು ಹನುಮಾನ್ ರಥಗಳಿಗೆ ಸಾಣೂರು ಗ್ರಾಮದ ಪದ್ಮನಾಭ ಆಚಾರ್‍ಯರು ರೂವಾರಿಯಾದರೆ, ಬೆಳ್ಳಿಯ ರಥಕ್ಕೆ ಉಜಿರೆಯ ಸುನಿಲ್ ಚಿಪಳೂಣಕರ್ ಶಿಲ್ಪಿಯಾಗಿದ್ದಾರೆ.
“ಬೋಗಿ ಮತ್ತು ಹಲಸಿನ ಮರಗಳಿಂದ ನಿರ್ಮಿಸಲಾಗಿರುವ ರಜತರಥಕ್ಕೆ ಅಂದಾಜು 400 ಕಿಲೋ ಬೆಳ್ಳಿಯನ್ನು ಬಳಸಿಕೊಂಡಿದ್ದಾರೆ. ರಥದ ಶ್ವೇತಚ್ಛತ್ರ ಕೂಡ ಬೆಳ್ಳಿಯಿಂದ ನಿರ್ಮಾಣವಾಗಿರುವುದು ಇಲ್ಲಿನ ವಿಶೇಷತೆ. ರಥದ ನಾಲ್ಕು ಮೂಲೆಗಳಲ್ಲಿ ನಾಲ್ಕು ಆನೆಗಳು, ಎರಡೂ ಬದಿ ಸಿಂಹದ ಕಂಬಗಳು, ರಥದ ಕೆಳ ಪಾರ್ಶ್ವದಲ್ಲಿ ಅಷ್ಟಲಕ್ಷ್ಮಿಯರು, ನಂದಿ, ಶಿವ, ನವಿಲು, ಕುದುರೆ, ನಾಗ, ಗಿಳಿ, ಹಂಸಗಳಲ್ಲದೆ 81 ಮುಗುಳಿ ಮತ್ತು 81 ಗಂಟೆಗಳ ರಥದ ಶೋಭೆಯನ್ನು ಹೆಚ್ಚಿಸಿವೆ” ಎಂದು ರಜತ ರಥವನ್ನು ಬಣ್ಣಿಸಲಾಗಿದೆ.
ಏಕಕಾಲದಲ್ಲಿ ಐದು ರಥಗಳ ನಿರ್ಮಾಣದ ಉದ್ದೇಶವನ್ನು ವಿವರಿಸುತ್ತ ಆತ್ಮಾನಂದಸರಸ್ವತಿಗಳು “ಕ್ಷೇತ್ರವೆಂದ ಮೇಲೆ ಅಲ್ಲಿ ಉತ್ಸವಗಳಿಗೆ ಹಚ್ಚಿನ ಮಹತ್ವವಿರುತ್ತದೆ. ಆ ಉತ್ಸವಗಳ ಪೈಕಿ ರಥೋತ್ಸವವು ಎಲ್ಲಕ್ಕಿಂತ ದೊಡ್ಡದು. ಅದಕ್ಕಾಗಿ ಬ್ರಹ್ಮರಥದ ನಿರ್ಮಾಣವಾಗಿದೆ. ರಾಮಭಕ್ತನಾದ ಆಂಜನೇಯ ಸ್ವಾಮಿಯೂ ಒಂದನ್ನು ಮಾಡಿಸಿಕೊಂಡನು. ಭಕ್ತಕೋಟಿ ಆಸೆಪಟ್ಟಿದ್ದರಿಂದ ಬ್ರಹ್ಮಕಲಶೋತ್ಸವದ ನೆನಪಿಗಾಗಿ ಬೆಳ್ಳಿತೇರು ರೂಪುಗೊಂಡಿತು” ಎಂದು ಹೇಳಿದ್ದಾರೆ.
ಹೊರಟಿವೆ ಪಂಚಾಶ್ವಗಳು
ಹೊರಟಿದೆ ನೋಡಿ ಪಂಚ ಅಶ್ವಗಳನ್ನು ಹೊಂದಿರುವ ಬ್ರಹ್ಮರಥ, ತೇಜಸ್ಸಿನಿಂದ, ಅತ್ಯುತ್ಸಾಹದಿಂದ ಹೊರಡಲು ಸಿದ್ಧವಾಗಿದೆ. ಬೆಳದಿಂಗಳ ರಾತ್ರಿಗೆ ಶ್ವೇತ ವರ್ಣವೇ ಅಶ್ವಗಳಾಗಿ ಬಂದಂತೆ ಈ ಐದು ಬಿಳಿಯ ಅಶ್ವಗಳು ಆಕಾಶಮಾರ್ಗಕ್ಕೋ ಅಥವಾ ಪ್ರಪಂಚವನ್ನೇ ಪರ್ಯಟನೆ ಮಾಡಲೋ ಹೊರಟಿರುವಂತೆ ಕಾಣುತ್ತವೆ.
ಈ ಬ್ರಹ್ಮರಥವು ದೇವಲೋಕದಿಂದ ಆಕಾಶಮಾರ್ಗದ ಮೂಲಕ ಎಲ್ಲಿಗೆ ಬಂದಿತ್ತು ಗೊತ್ತೆ ? ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀ ರಾಮಮಂದಿರ ಕ್ಷೇತ್ರಕ್ಕೆ.
ಸ್ವರ್ಗಲೋಕದಿಂದ ಇಳಿದು ಬಂದಂತಿರುವ ಈ ಐದು ಅಶ್ವಗಳಿರುವ ಬ್ರಹ್ಮರಥವು ಇಲ್ಲಿಗೆ ಬಂದು ಆದಾಗಲೆ ಹಿಂತಿರುಗಿ ಹೊರಡಲು ಸಜ್ಜಾದಂತಿದೆ. 2007 ರಲ್ಲಿ 54 ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ನಿರ್ಮಿತವಾಗಿರುವ ಎಲ್ಲಿಯೂ ಇಲ್ಲದ ವಿಶೇಷ ಬ್ರಹ್ಮರಥವಿದು. ಇದನ್ನು ಎಳೆಯಲು ಐದು ಕುದುರೆಗಳು, ದೇಹ ಎಂಬುದು ರಥ, ಆತ್ಮ ಎಂಬುದು ರಥಿಕ. ಪಂಚಪ್ರಾಣಗಳೇ ಈ ಐದು ಕುದುರೆಗಳು ಎಂಬ ಅರ್ಥವನ್ನು ಹೇಳುವ ಬ್ರಹ್ಮರಥವು 72 ಅಡಿ ಎತ್ತರವಿದೆ ಎಂದು ಧರ್ಮಸ್ಥಳದ ಸುಮಲತಾ ಬಂಗಾಡಿ ಬರೆದಿದ್ದಾರೆ.
ಸದ್ಗುರು ಪಟ್ಟಾಭಿಷೇಕ
ಆತ್ಮಾನಂದ ಸರಸ್ವತಿಗಳನ್ನು ಕನ್ನಡ ನಾಡಿನ ಬಿಲ್ಲವ, ನಾಮಧಾರಿ, ದೀವರ, ಮಲಯಾಳಿ ಬಿಲ್ಲವ ಮುಂತಾದ ಹತ್ತಾರು ಹಿಂದುಳಿದ ವರ್ಗಗಳ ಪ್ರಜೆಗಳು ಅವರ ಸೇವಾಕಾರ್‍ಯಗಳನ್ನು ಮೆಚ್ಚಿ ವಿಶೇಷವಾಗಿ ಪ್ರೀತಿಸಿದರು, ಗೌರವಿಸಿದರು. ತಮ್ಮ ‘ಸದ್ಗುರು’ವೆಂದು ಸ್ವೀಕರಿಸಿದರು. ಅದರ ಕುರುಹಾಗಿ 2008ನೇ ವರ್ಷದ ಜನವರಿ ತಿಂಗಳಲ್ಲಿ ಉತ್ತರಾಯಣ ಪುಣ್ಯ ಕಾಲದ ಉದಯವಾದ ಬಳಿಕ (19-1-2008 ರಿಂದ 22-1-2008 ‘ಸದ್ಗುರು ಪಟ್ಟಾಭಿಷೇಕ’ವೆಂಬ ಮಹೋನ್ನತ ಕಾರ್ಯಕ್ರಮವೊಂದನ್ನು ಭಕ್ತಕೋಟಿ ರೂಪಿಸಿಕೊಂಡು ಅತ್ಯಂತ ಯಶಸ್ವಿಯಾಗಿ ನೆರವೇರಿಸಿತು. ಪಟ್ಟಾಭಿಷೇಕಕ್ಕೆ ಪೂರ್ವಭಾವಿಯಾಗಿ ವಾಸ್ತುಹೋಮ, ಅಘೋರ ಹೋಮ, ರಾಕ್ಷೆಘ್ನ, ಮಹಾಸುದರ್ಶನಯಾಗ, ಸನ್ಯಾಸಿಪಂಜುರ್ಲಿ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಗಳಿಗೆ ನೈವೇದ್ಯ ಸೇವೆ, ಶ್ರೀ ರಾಮ ಪ್ರಸನ್ನಯಾಗ, ಶ್ರೀ ಆಂಜನೇಯ ಪ್ರಸನ್ನಯಾಗ ಮೊದಲಾದ ಧಾರ್ಮಿಕ ಸತ್ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಶುಕ್ಲ ಪಕ್ಷದ ಚತುರ್ದಶಿಯ ಮೀನ ಲಗ್ನದ ಸುಮುಹೂರ್ತದಲ್ಲಿ (21-1-2008) ಸಪ್ತತೀರ್ಥಕಲಶಜಲಾಭಿಷೇಕದ ಬಳಿಕ ಸಿಂಹಾಸನಾರೋಹಣ ಮಾಡಿಸಿ, ಕಿರೀಟವನ್ನು ತೊಡಿಸಿದರು. ಕೇರಳದ ಶಿವಗಿರಿಯ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಮಠದ ಪೀಠಾಧಿಪತಿಗಳಾದ ಶ್ರೀ ಪ್ರಕಾಶಾನಂದಸ್ವಾಮಿಗಳು ಮತ್ತು ಶ್ರೀ ಸ್ವರೂಪಾನಂದಸ್ವಾಮಿಗಳು ಕಿರೀಟಧಾರಣೆ ಮಾಡಿಸಿ ‘ಕನಕ ಪುಷ್ಪಾಂಜಲಿ’ಯನ್ನು ಸಮರ್ಪಿಸಿದರು. ಈ ಮಹನೀಯರೂ ಕೂಡಿದಂತೆ ಆ ಕಾರ್ಯಕ್ರಮಕ್ಕೆ ಒಟ್ಟು 54 ಯತಿವರ್ಯರು ತಮ್ಮ ಸನ್ನಿಧಾನವನ್ನು ದಯಪಾಲಿಸಿ ದಿವ್ಯತೆಯನ್ನು ತಂದಿದ್ದರು. ಅದು ಶತಮಾನದ ಅವಿಸ್ಮರಣೀಯವೂ, ಭಕ್ತಿರಸಭರಿತವೂ ಆದ
ಸಮಾರಂಭಗಳಲ್ಲೊಂದೆಂಬಂತೆ ಬೆಳಗಿತು.
“ಆತ್ಮಾನಂದಸರಸ್ವತಿಗಳು ಓರ್ವ ಶ್ರೇಷ್ಠಗುರುವಾಗಿ ಬಿಲ್ಲವ ಸಮಾಜ ಮಾತ್ರವಲ್ಲ, ಬ್ರಹ್ಮಶ್ರೀ ನಾರಾಯಣಗುರುಗಳಂತೆ, ನಿತ್ಯಾನಂದಸ್ವಾಮಿಗಳಂತೆ ದಿಕ್ಕು ತಪ್ಪಿರುವ ಇಡೀ ಸಮಾಜವನ್ನು ಸತ್ಪಥದಲ್ಲಿ ಮುನ್ನಡೆಸುವ ಮಾನವ ಸಮುದಾಯದ ಗುರುವಾಗಿದ್ದಾರೆ. ಕನಕದಾಸ, ಪುರಂದರದಾಸ, ರಾಮಕೃಷ್ಣ ಪರಮಹಂಸರಂತೆ ಭಕ್ತಿಮಾರ್ಗದ ಮೂಲಕ ಭಗವಂತನನ್ನು ಕಾಣಲು ಭಕ್ತ ಜನರಿಗೆ ಪ್ರೇರಣೆ ನೀಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರಂತೆ ಯುವಪೀಳಿಗೆಯನ್ನು ರಾಷ್ಟ್ರರಕ್ಷಣ ಕಾರ್‍ಯಕ್ಕಾಗಿ ಜಾಗೃತಗೊಳಿಸುತ್ತಿದ್ದಾರೆ” ಎಂದು ಆ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ತಮ್ಮ ಅಂತರಂಗದ ಅನಿಸಿಕೆಗಳನ್ನು ಪ್ರಕಟಿಸಿದರು. ಗುರುಗಳು ಸರ್ವರನ್ನೂ ನಗೆಮೊಗದಿಂದ ಕಾಣುತ್ತ ಸನ್ಮಂಗಳವಾಗಲೆಂದು ಆಶೀರ್ವದಿಸಿದರು.
ಯತಿವರ್ಯರ ಪುಣ್ಯನಾಮಸ್ಮರಣೆ
ಕೇರಳದ ಶಿವಗಿರಿಯ ಬ್ರಹ್ಮಶ್ರೀನಾರಾಯಣಗುರುಮಠದ ಪೀಠಾಧಿಪತಿಗಳಾದ ಶ್ರೀ ಪ್ರಕಾಶಾನಂದ ಸ್ವಾಮಿಗಳು ಮತ್ತು ಶ್ರೀ ಸ್ವರೂಪಾ ನಂದಸ್ವಾಮಿಗಳೊಡನೆ 54 ಮಂದಿ ಯತಿವರ್ಯರು ಭಾಗವಹಿಸಿದ್ದರೆಂಬುದು ಅಮೋಘವಾದ ವಿಚಾರ. ಆ ಸಮುದಾಯದಲ್ಲಿ ಲಭ್ಯವಾಗಿರುವ ಪುಣ್ಯನಾಮಗಳನ್ನಾದರೂ ಈ ಹೊತ್ತಿನಲ್ಲಿ ಸ್ಮರಿಸಬೇಕು. ಪೂಜ್ಯರಾದ ಸ್ವಾಮಿ ಸ್ವರೂಪಾನಂದ, ಸ್ವಾಮಿ ವಿಖ್ಯಾತಾನಂದ, ಸ್ವಾಮಿ ಪರಾನಂದ, ಸ್ವಾಮಿ ಸಹಜಾನಂದ, ಸ್ವಾಮಿ ಮಹೇಶ್ವರಾನಂದ, ಸ್ವಾಮಿ ಅರೂಪಾನಂದ, ಸ್ವಾಮಿ ಬೋಧಿತೀರ್ಥ, ಸ್ವಾಮಿ ವಿಶ್ವಬೋಧಿತೀರ್ಥ, ಸ್ವಾಮಿ ಸುಗುಣಾನಂದ, ಸ್ವಾಮಿ ವಿಶಾಲಾನಂದ, ಸ್ವಾಮಿ ಶಿವಸ್ವರೂಪಾನಂದ, ಸ್ವಾಮಿ ಶಾಂತಾನಂದ, ಸ್ವಾಮಿ ಭಕ್ತನಾರಾಯಣಪ್ರಸಾದ, ಸ್ವಾಮಿ ಅಮಯಾನಂದ, ಸ್ವಾಮಿ ನಿಜಾನಂದ, ಸ್ವಾಮಿ ನಾರಾಯಣಾನಂದ, ಸ್ವಾಮಿ ನಾರಾಯಣಾನಂದಗಿರಿ, ಸ್ವಾಮಿ ಸತ್ಯಾನಂದತೀರ್ಥ, ಸ್ವಾಮಿ ಧರ್ಮಾನಂದ, ಸ್ವಾಮಿ ಸುಕೃತಾನಂದ, ಸ್ವಾಮಿ ಮೋಹನದಾಸ, ಸ್ವಾಮಿ ನಿರಂಜನಸರಸ್ವತಿ ಮುಂತಾದವರು ಆತ್ಮಾನಂದ ಸರಸ್ವತಿಗಳ ಕಾರ್ಯಶೀಲತೆಯನ್ನು ಮೆಚ್ಚಿಕೊಂಡು, ಭವಿಷ್ಯವು ಉಜ್ವಲವಾಗಲೆಂದು ಹಾರೈಸಿದರು.
ಶ್ರೀ ಆತ್ಮಾನಂದ ಸರಸ್ವತಿಗಳ ದಿವ್ಯೋಪದೇಶ
ಪಟ್ಟಾಭಿಷೇಕದ ಶುಭಸಂದರ್ಭದಲ್ಲಿ ಆತ್ಮಾನಂದಸರಸ್ವತಿಗಳು ಭಕ್ತರ ಮುಂದೆ ತಮ್ಮ ಹೃದಯವನ್ನು ಹೀಗೆ ತೆರೆದಿಟ್ಟರು: “ನಾವು ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದು ಪೂರ್ಣವಾಗುವವರೆಗೆ ನಿರಂತರವಾಗಿ ಪ್ರಯತ್ನಶೀಲರಾಗಬೇಕು. ಯಾರೂ ದುಶ್ಚಟಗಳಿಗೆ ಬಲಿಯಾಗಬಾರದು. ವರದಕ್ಷಿಣೆಯ ಪಿಡುಗಿನಿಂದ ದೂರವಿರಬೇಕು. ಹಣ ಹಣ ಎಂದು ಸದಾಕಾಲ ಹಣಸಂಗ್ರಹಕ್ಕೆ ಬಲಿಯಾಗಿ ಸಮಾಜವನ್ನು ಮರೆಯಬಾರದು. ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣಬೇಕು. ಎಲ್ಲರೂ ನಮ್ಮವರು ಎಂದು ತಿಳಿಯಬೇಕು. ಅವರ ಕಷ್ಟ ಸುಖಗಳಲ್ಲಿ ಆಗುಹೋಗುಗಳಲ್ಲಿ ಭಾಗಿಯಾಗಿ ಸ್ಪಂದಿಸಬೇಕು. ‘ಅವನು ದುಶ್ಚಟಗಳಿಗೆ ದಾಸನಾಗಿದ್ದಾನೆ. ಅವನನ್ನು ಮೇಲೆತ್ತುವುದು ಸಾಧ್ಯವಿಲ್ಲ’ ಎಂದು ದೂರುವುದು ಸಲ್ಲದು. ಹಾಗೆ ಅವನತಿಗೆ ತುತ್ತಾದವರನ್ನು ಮೇಲೆತ್ತುವ ಕಾರ್ಯ ಮಾಡಬೇಕು. ಅದಕ್ಕಾಗಿ ಮೊದಲು ಅವರಿಗೆ ವಿದ್ಯೆ ಕೊಡಬೇಕು. ವಿದ್ಯಾವಂತರಾದರೆ ಅವರು ಗುಣವಂತರಾಗುತ್ತಾರೆ, ವಿಚಾರವಂತರಾಗಿತ್ತಾರೆ”.
“ನಾವು ಕೈಗೊಳ್ಳುವ ಯಾವುದೇ ಯೋಜನೆಯಾಗಿರಲಿ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ನಮ್ಮಿಂದ ದೊಡ್ಡ ದೊಡ್ಡ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸಾಧ್ಯವಿಲ್ಲದಿರಬಹುದು. ಆದರೆ ಹಮ್ಮಿಕೊಂಡ ಯೋಜನೆ ಮಾತ್ರ ಲೋಕೋಪಯೋಗಿಯಾಗುವಂತೆ, ಫಲಕಾರಿಯಾಗುವಂತೆ ಕಾಳಜಿ ವಹಿಸಬೇಕು.”
“ಮನುಷ್ಯ ಜನಾಂಗಕ್ಕೆ ಒಳ್ಳೆಯದಾಗಬೇಕಾದರೆ ಶಿಷ್ಯರೂ, ಭಕ್ತರೂ ಆದ ನೀವು ಏನು ಮಾಡಬೇಕೆಂಬುದನ್ನು ಚಿಂತಿಸಬೇಕು. ಈ ವಿಷಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ನಾವು ಅನುಸರಿಸಬೇಕು. ಅವರ ಬೋಧನೆಗಳನ್ನು ಕಾರ್ಯರೂಪಕ್ಕೆ ತರಬೇಕು.”
“ಹಿಂದೆ ರಾಜಮಹಾರಾಜರು ತಮ್ಮ ಮಕ್ಕಳನ್ನು ಗುರುಗಳ ಆಶ್ರಮಗಳಿಗೆ ವಿದ್ಯೆ ಕಲಿಸಲು ಕಳುಹಿಸುತ್ತಿದ್ದರು. ಆಗ ಅವರಿಗೆ ಬೇರೆ ಬೇರೆ ವಿದ್ಯೆಗಳ ಜೊತೆಗೆ ಅಧ್ಯಾತ್ಮ ವಿದ್ಯೆಯೂ ಸಿಕ್ಕುತ್ತಿತ್ತು. ಈ ಗುರುಮಠದಿಂದಲೂ ಅಂತಹ ಕಾರ್ಯವಾಗಬೇಕು. ಸ್ವಾಮಿಗಳೆಂದರೆ ಅವರು ತ್ಯಾಗಪುರುಷರಾಗಿ ಬಾಳಬೇಕು ಇದ್ದವರು ಕೈಲಾದ್ದು ದಾನವಾಗಿ ಕೊಡಿರಿ, ಅದನ್ನು ನಾವು ಇಲ್ಲದವರಿಗೆ ಕೊಡುತ್ತೇವೆ.”
“ಈಗ ನೀವು ತನ್ನ ತಲೆಯಮೇಲಿಟ್ಟಿರುವುದು ಸ್ವರ್ಣಕೀರಿಟವಲ್ಲ, ಅದು ಮುಳ್ಳಿನ ಕಿರೀಟ. ಅದು ನಮ್ಮನ್ನು ಬಂಧನದಲ್ಲಿಡುತ್ತದೆ. ಎಲ್ಲರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವಂತೆ ಮಾಡುತ್ತದೆ. ನಾವು ಯಾವುದೊಂದು ಪಕ್ಷದ, ಯಾವುದೊಂದು ಜಾತಿಯ ಗುರುವಲ್ಲ. ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕೆಂಬುದೇ ನಮ್ಮ ಸದಿಚ್ಛೆ. ಅದಕ್ಕಾಗಿ ನಾವು ಸಮಾಜದ ಎಲ್ಲ ಬಾಂಧವರೂ ಸಹಕಾರ ನೀಡಬೇಕೆಂದು ಕೇಳಿಕೊಳ್ಳುತ್ತೇವೆ. ಸಮತಾಭಾವದಿಂದ ನಾವೆಲ್ಲರೂ ಒಗ್ಗೂಡಿ ಕೆಲಸಮಾಡೋಣ. ಈಗ ನಾನೊಬ್ಬ ತಿರುಕ. ನನ್ನ ಕನಸುಗಳನ್ನು ನನಸಾಗಿಸಲು ನಿಮ್ಮೆಲ್ಲರ ಸಹಕಾರ ಬೇಕು.”
“ಈ ರಾಮಕ್ಷೇತ್ರವನ್ನು ನಾನು ಕಟ್ಟಿದೆನೆಂದು ಹೇಳುವುದು ಸರಿಯಲ್ಲ. ಭಕ್ತರೇ ಕಟ್ಟಿದ್ದು ಎಂಬುದು ಸತ್ಯವಾದ ಮಾತು. ದುಃಖವಾದರೂ ಸತ್ಯವನ್ನು ಹೇಳಬೇಕು. ಭಕ್ತರ ಬಳಿಗೆ ನಾನು ಹೋದಾಗ ಯಾರೂ ಇಲ್ಲವೆನ್ನಲಿಲ್ಲ. ಪ್ರಭು ಶ್ರೀರಾಮ ಚಂದ್ರನೇ ಕ್ಷೇತ್ರ ನಿರ್ಮಾಣದ ಶಕ್ತಿ ಪುರುಷ. ಅವನ ಯೋಜನೆಯನ್ನು ಹನುಮಂತ ದೇವರು ಕಾರ್ಯರೂಪಕ್ಕೆ ಇಳಿಸಿದ್ದಾನೆ”.
ಬ್ರಹ್ಮಶ್ರೀ ನಾರಾಯಣ ಗುರುಗಳು
ತಮ್ಮ ಸಮಾಜ ಸೇವಾಕಾರ್‍ಯಗಳಿಗೆ ಆತ್ಮಾನಂದಸರಸ್ವತಿಗಳು ಆದರ್ಶವಾಗಿ ಸ್ವೀಕರಿಸಿರುವ ನಾರಾಯಣಗುರುಮಹಾರಾಜರೆಂಬ ವಿಭೂತಿಪುರುಷರನ್ನು (1854-1928) ಈ ಹೊತ್ತಿನಲ್ಲಿ ವಿಶೇಷವಾಗಿ ಸ್ಮರಿಸಿಕೊಳ್ಳಬೇಕು. ಒಂದು ಶತಮಾನಕ್ಕೂ ಹಿಂದಿನ ಕೇರಳರಾಜ್ಯದ ಸಾಮಾಜಿಕ ವಿಷಮತೆಯನ್ನು ಯಾರು ತಾನೇ ವರ್ಣಿಸಲು ಸಾಧ್ಯವಿದೆ! ಮೇಲು ಕೀಳೆಂಬ, ಸ್ಪೃಶ್ಯ-ಅಸ್ಪೃಶ್ಯವೆಂಬ ಭೇದ ಭಾವಗಳು ತುಂಬಿತುಳುಕುತ್ತಿದ್ದ ಕಾಲವದು. ಅಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಆ ನಾಡಿನಲ್ಲಿ ನಾರಾಯಣಗುರುಗಳ ಅವತಾರವಾಯಿತು.
ನಾರಾಯಣಗುರುಗಳು ಬಾಲ್ಯದಿಂದಲೇ ಅತ್ಯಂತ ಮೇಧಾವಿ ಬಾಲಕರಾಗಿದ್ದು ಮಲಯಾಳಂ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯಗಳಿಸಿಕೊಂಡರು. ತಮ್ಮ ಸಮಾಜವು ಅಸ್ಪೃಶ್ಯತೆಯ ಪಿಡುಗಿನಿಂದ ಅನುಭವಿಸುತ್ತಿರುವ ಮೂಕವೇದನೆಯನ್ನು ಕಂಡು ಕರಗಿಹೋದರು. ಆ ಸಮಾಜದ ನವನಿರ್ಮಾಣ ಮಾಡಬೇಕು, ಆ ಮನುಷ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಅವರಲ್ಲಿ ವಿದ್ಯೆಯ ಪ್ರಕಾಶವನ್ನು ಬೆಳಗಿಸಬೇಕು ಎಂದು ಕಂಕಣಬದ್ಧರಾದರು. ವಿವಾಹಿತರಾಗಿದ್ದರೂ ಗೃಹಬಂಧನದಿಂದ ಮುಕ್ತರಾಗಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ಈಳವ ಸಮಾಜಕ್ಕೆ ದೇವಾಲಯ ಪ್ರವೇಶವಿರಲಿಲ್ಲವಾದ್ದರಿಂದ ತಾವೇ ಹಲವು ಕಡೆಗಳಲ್ಲಿ ಶಿವಾಲಯಗಳನ್ನು ನಿರ್ಮಾಣ ಮಾಡಿಸಿದರು.
ಉಪನಿಷತ್ತುಗಳ ಅದ್ವೈತ ತತ್ವಜ್ಞಾನವು ಅವರ ಅಂತಃಕರಣದ ಧರ್ಮವಾಯಿತು. ಕಲವನ್ಕೋಡು ಎಂಬಲ್ಲಿ ಸ್ಥಾಪಿಸಿದ ದೇವಾಲಯದಲ್ಲಿ, ದೇವರ ಜಾಗದಲ್ಲಿ ಒಂದು ನಿಲುಗನ್ನಡಿಯನ್ನು ಇರಿಸಿ ‘ನಿನ್ನಲ್ಲಿರುವ ದೇವರನ್ನು ನೀನು ಮೊದಲು ನೋಡಿಕೊ’ ಎಂದು ಬೋಧಿಸಿದರು. ಮೂಢನಂಬಿಕೆ ಹಾಗೂ ಮದ್ಯಮಾಂಸಗಳಿಂದ ಮುಕ್ತನಾದ ಸಾತ್ವಿಕ ಪೂಜಾವಿಧಾನಕ್ಕೆ ಒತ್ತುಕೊಟ್ಟರು. ಈಳವರಿಗಾಗಿ ಆಂಗ್ಲ-ಸಂಸ್ಕೃತ ವಿದ್ಯಾಶಾಲೆಗಳನ್ನು ತೆರೆದರು. ದೀನದಲಿತರನ್ನು ಮೇಲೆತ್ತುವ ಕ್ಷೇತ್ರದಲ್ಲಿ ರಕ್ತರಹಿತ ಕ್ರಾಂತಿಯನ್ನೇ ಮಾಡಿದ ಅವರು, ಆ ವರ್ಗದ ಆರಾಧ್ಯ ಮೂರ್ತಿಯೇ ಆದರು; ದಲಿತರ ಬಾಳಿನ
ನಿಶಾಪಥದ ಧ್ರುವತಾರೆಯೇ ಆದರು. ಅವರ ಮಾರ್ಗವನ್ನು ಅನುಷ್ಠಾನಕ್ಕೆ ತರಲು ‘ನಾರಾಯಣ ಧರ್ಮಪರಿಪಾಲನ ಯೋಗಂ’ ರೂಪುಗೊಂಡು ಕ್ರಿಯಾಶೀಲವಾಗಿದೆ.
‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ನಾರಾಯಣಗುರುಗಳ ಸಂದೇಶವನ್ನು ಆತ್ಮಾನಂದಸರಸ್ವತಿಗಳು ತಮ್ಮ ಕರ್ಮಯೋಗದ ಮೂಲ ಮಂತ್ರವಾಗಿಸಿಕೊಂಡಿದ್ದಾರೆ. ಕರ್ನಾಟಕದ ಕಾರವಾರವೂ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಒಂಬತ್ತು ಶಾಖಾಮಠಗಳನ್ನು ನಿರ್ಮಾಣಮಾಡಬೇಕೆಂದು ಅವರು ಸಂಕಲ್ಪಿಸಿದ್ದರು. ಅಲ್ಲಿ ನೆಲೆಗೊಳಿಸಲು ಶಿಷ್ಯ ಸ್ವೀಕಾರ ಮಾಡುವ ಚಿಂತನೆ ನಡೆಸಿದ್ದರು. ಆ ಮಠಗಳಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಶ್ರಮ ಶಾಲೆಗಳನ್ನು ತೆರೆಯಬೇಕು; ಆ ಮಕ್ಕಳಿಗೆ ಆಧುನಿಕ ವಿದ್ಯೆ ಜೊತೆಗೆ, ಸಂಸ್ಕೃತ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣಗಳು ದೊರೆಯುಮಂತಾಗಬೇಕು. ಅವರು ಸಂಸ್ಕಾರವಂತರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವುದಲ್ಲದೆ ರಾಷ್ಟ್ರವನ್ನು ಕಟ್ಟುವ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವಂತಾಗಬೇಕು ಎಂದು ಭವಿಷ್ಯದ ರೂಪುರೇಖೆಗಳನ್ನು ಸಿದ್ಧಪಡಿಸಿದ್ದರು.
ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಯೋಜನೆ ಆತ್ಮಾನಂದಸರಸ್ವತಿಗಳ ಚಿತ್ತದಲ್ಲಿತ್ತು. ಆಯಾ ಗ್ರಾಮದ ಶಿಕ್ಷಣ ಪ್ರೇಮಿಗಳು ಸಮಿತಿಗಳನ್ನು ರಚಿಸಿಕೊಂಡು ಅರ್ಧದಷ್ಟು ದ್ರವ್ಯವನ್ನು ಹೂಡಿ ಕಾರ್ಯಾರಂಭ ಮಾಡಿದರೆ ಮಿಕ್ಕರ್ಧವನ್ನು ಮಠದ ಕಡೆಯಿಂದ ಪೂರೈಸುವ ಕ್ರಮವನ್ನು ಜಾರಿಗೆ ತರುವವರಿದ್ದರು. “ಒಂದು ದಶಕದ ಹಿಂದೆಯೇ ಈಗ ಕ್ರೋಢಿಕರಣಗೊಳ್ಳುತ್ತಿರುವಂತೆ ಜನಬೆಂಬಲ ಲಭಿಸಿದ್ದರೆ ಅದೆಷ್ಟೋ ಸತ್ಕಾರ್ಯಗಳನ್ನು ಸಾಕ್ಷಾತ್ಕಾರಗೊಳಿಸಬಹುದಾಗಿತ್ತು ಎನ್ನುತ್ತಿದ್ದರು.
“ಜಾಗತಿಕಮಟ್ಟದ ಸ್ಥಿತಿಗತಿಗಳನ್ನು ಕಂಡಾಗ ಬಹಳ ನೋವಾಗುತ್ತದೆ. ಒಬ್ಬರನ್ನೊಬ್ಬರು ಕೀಳುಗಳೆಯುವ ವಿಷಮ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಜಾತಿಜಾತಿಗಳ ನಡುವೆ ರಾಷ್ಟ್ರ ರಾಷ್ಟ್ರಗಳ ನಡುಗೆ ಹೊಗೆಯಾಡುತ್ತಿರುವ ದ್ವೇಷಾಸೂಯೆಗಳನ್ನು ಹೊಡೆದೋಡಿಸಲೇಬೇಕು. ಸರ್ವಜನಾಂಗಕ್ಕೂ ಪ್ರೀತಿಪ್ರೇಮಗಳ ಅಮೃತಪಾನ ಮಾಡಿಸಲೇಬೇಕು. ರಾಮ ರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವ ಇಚ್ಚಾಶಕ್ತಿಯನ್ನು ಪ್ರತಿಯೊಬ್ಬರೂ ಮೆರೆಯಬೇಕು. ಅದಕ್ಕಾಗಿ ಮನೆಮನೆಗಳಲ್ಲಿ, ಮನಮನಗಳಲ್ಲಿ ಪ್ರತಿನಿತ್ಯವೂ ರಾಮತಾರಕಮಂತ್ರದ ಪಠಣವಾಗಲೇಬೇಕು. ‘ಶ್ರೀ ರಾಮ ಜಯರಾಮ ಜಯರಾಮ ರಾಮ’ ಎಂಬ ಮಂತ್ರವು ಮೊಳಗಲೇಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಶ್ರೀ ರಾಮಕ್ಷೇತ್ರದ ವತಿಯಿಂದ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ಮುನ್ನಡೆಯುವ ಸಂಕಲ್ಪವಿದೆ. ಶ್ರೀ ರಾಮಭಕ್ತರು ಕಾಯೇನವಾಚಾಮನಸಾ ತ್ರಿಕರಣಪೂರ್ವಕವಾಗಿ ನಮ್ಮ ಜೊತೆ ಸಹಕರಿಸಬೇಕೆಂದು ವಿನಂತಿಸುತ್ತೇವೆ” ಎಂಬುವುದಾಗಿಯೂ ಸ್ವಾಮಿಗಳು ಘೋಷಿಸಿದ್ದರು. “ಪ್ರತಿನಿತ್ಯ ಕನಿಷ್ಟ ಹತ್ತರಿಂದ ಹದಿನೈದು ನಿಮಿಷ ಕಾಲ ರಾಮತಾರಕ ಮಂತ್ರವನ್ನು ಪಠಿಸುತ್ತ ಹೋದರೆ ಅವರ ಎಲ್ಲ ಕಷ್ಟಾನಿಷ್ಟಗಳು ದೂರವಾಗಿ ‘ತಲೆಯಭಾರ ಹೆಗಲಿಗೆ’ ಎಂಬಂತೆ ಮನಸ್ಸಿಗೆ ಶಾಂತಿ ಸಮಾಧಾನ ದೊರೆಯುವುದರಲ್ಲಿ ಸಂದೇಹವಿಲ್ಲ. ನಮ್ಮೆಲ್ಲರ ಕೋರಿಕೆ ಬೇಡಿಕೆಗಳನ್ನು ಪ್ರಭು ಶ್ರೀರಾಮನು ಅನುಗ್ರಹಿಸುತ್ತಾನೆ” ಎಂಬುವುದಾಗಿಯೂ ಸ್ವಾಮಿಗಳು ಆಶ್ವಾಸನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಗುರುವಂದನೆ
ಶ್ರೀರಾಮಕ್ಷೇತ್ರದಲ್ಲಿ ನಡೆದ ಸದ್ಗುರು ಪಟ್ಟಾಭಿಷೇಕದ ತರುವಾಯ ಮಂಗಳೂರು ಮಹಾನಗರದಲ್ಲಿ ಆತ್ಮಾನಂದ ಸರಸ್ವತಿಗಳ ಗುರುವಂದನಾ ಮತ್ತು ಗುರುಪೂಜಾ ಸಮಾರಂಭವು (22-1-2008) ಅತ್ಯಂತ ಭಕ್ತಿಮಯ ವಾತಾವರಣದಲ್ಲಿ ನಡೆಯಿತು. ಆ ದಿನ ಬೆಳಿಗ್ಗೆಯೇ ಶ್ರೀ ರಾಮಕ್ಷೇತ್ರದಿಂದ ಹೊರಟ ಗುರುಗಳ ವೈಭವದ ದಿಗ್ವಿಜಯಯಾತ್ರೆಯು ಮಧ್ಯಾಹ್ನದ ವೇಳೆಗೆ ಮಂಗಳೂರು ಪುರಪ್ರವೇಶ ಮಾಡಿತು. ನೆಹರೂ ಮೈದಾನದಲ್ಲಿ ಆ ಕಾರ್ಯಕ್ರಮಗಳಿಗೆ ವಿಶಾಲವಾದ ವೇದಿಕೆ ಸಿದ್ಧವಾಗಿತ್ತು. ಆ ಹೊತ್ತಿನಲ್ಲಿ ಪಂಪ್‌ವೆಲ್ ವೃತ್ತದಿಂದ ನಾಡಿನ ಸಾಂಸ್ಕೃತಿಕ ಹಿರಿಮೆ ಗರಿಮೆಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳ, ಜನಪದ ಕಲಾಪ್ರಕಾರಗಳ ಮತ್ತು ಕೊಂಬು, ಚೆಂಡೆ ಮುಂತಾದ ವಾದ್ಯಮೇಳಗಳ ವೈಭವೋಪೇತವಾದ ಮೆರವಣಿಗೆಯೊಂದು ಸ್ವಾಮಿಗಳನ್ನು ವೇದಿಕೆಗೆ ಬಿಜಯಂಗೈಸಿಕೊಂಡು ಹೋಯಿತು. ವಿವಿಧ ಜನಾಂಗಗಳ ಮುಖಂಡರೂ, ವಿವಿಧ ರಾಜಕೀಯ ಪಕ್ಷಗಳ ಜನನಾಯಕರೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸದ್ಗುರುವಿನ ಕೃಪೆಗೆ ಪಾತ್ರರಾದರು. ಹಿಂದುಳಿದ ವರ್ಗಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು, ತಮ್ಮದೇ ಏಳಿಗೆಗಾಗಿ ಗುರುಮಠದ ಕೃಪಾಶ್ರಯದಲ್ಲಿ ಒಂದುಗೂಡಬೇಕು ಎಂಬ ಅಭಿಪ್ರಾಯವನ್ನು ಆ ಮುಂದಾಳುಗಳು ಏಕಕಂಠದಿಂದ ಅಭಿವ್ಯಕ್ತಗೊಳಿಸಿದರು.
ಭಕ್ತರ ಸೇವಾಕಾರ್‍ಯಗಳು
ರಾಮನಾಮಸಪ್ತಾಹ, ರಥೋತ್ಸವ ಮುಂತಾದ ವಿಶೇಷ ಸಮಾರಂಭಗಳಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರಕನ್ನಡ ಮುಂತಾದ ಬೇರೆ ಜಿಲ್ಲೆಗಳಿಂದಲೂ ಸ್ವಯಂಸೇವಕರು ಆಗಮಿಸಿ ಆ ಹೊತ್ತಿನ ಅನ್ನ ಸಂತರ್ಪಣೆಯೂ ಕೂಡಿದಂತೆ ಎಲ್ಲ ಕಾರ್‍ಯಭಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸದ್ಗುರುಗಳ ಆಶೀರ್ವಾದ ಪಡೆದುಕೊಂಡು ಮರಳುತ್ತಾರೆ. ಉತ್ತರಕನ್ನಡ ಜಿಲ್ಲೆಯ ಭಕ್ತರಂತೂ ಕಳೆದೊಂದು ದಶಕದಿಂದಲೂ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತ ಈಗೊಂದು ಶಾಖಾಮಠವನ್ನು ತಮ್ಮ ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂಬ ಕಾತುರತೆಯಲ್ಲಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪದವಿ ಶಿಕ್ಷಣಗಳು ಕೂಡಾ ಸುಲಭವಾಗಿ ದೊರೆಯುವಂತಾಗಬೇಕೆಂಬ ಗುರುಹಂಬಲಕ್ಕೆ ಪೂರಕವಾಗಿ ಹಲವು ಭಕ್ತರು ಸ್ಪಂದಿಸುತ್ತಿದ್ದಾರೆ. ದೂರದ ರಾಜಸ್ಥಾನದಲ್ಲೂ ಒಂದು ಶಾಖಾಮಠದ ನಿರ್ಮಾಣಕ್ಕೆ ಅಲ್ಲಿನ ಗುರುಭಕ್ತರು ಪ್ರಯತ್ನಶೀಲರಾಗಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಕ್ತರೂ ಸದ್ಗುರುಗಳ ಕಾರ್ಯ ಯೋಜನೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಸತ್ಕಾಲ ಕೂಡಿ ಬರುತ್ತಿದೆ. ಶ್ರೀರಾಮ ಕ್ಷೇತ್ರಕ್ಕೆ ಬೇರೆ ಬೇರೆ ದಿಕ್ಕುಗಳಿಂದ ಆಗಮಿಸುವ ಭಕ್ತರಿಗೆ ನಿತ್ಯವೂ ಅನ್ನದಾಸೋಹವನ್ನು ನೀಡುತ್ತಿದೆ. ನಾಡಿನ ಎಲ್ಲ ದಿಕ್ಕುಗಳಿಂದಲೂ ಧರ್ಮಸ್ಥಳಕ್ಕೆ ಸಾರಿಗೆ ಬಸ್ಸುಗಳ ಸೌಕರ್ಯ ಬಹಳ ಹಿಂದಿನಿಂದಲೂ ಹರಿದುಬರುತ್ತಿರುವುದರಿಂದ ಆ ದಾರಿಯಲ್ಲಿಯೇ ಇರುವ ರಾಮಕ್ಷೇತ್ರಕ್ಕೂ ಆ ಸೌಕರ್ಯ ಅನಾಯಾಸವಾಗಿ ಕೂಡಿ ಬಂದಿರುವುದು ರಾಮಕೃಪೆಯೆಂದೇ ಹೇಳಬೇಕು.
ಒಂಬತ್ತು ಎಂಬುದು ಪೂರ್ಣ ಪರಬ್ರಹ್ಮ ಸಂಖ್ಯೆ
ಒಂಬತ್ತು ಎಂಬುದು ಪೂರ್ಣಸಂಖ್ಯೆ, ಪೂರ್ಣ ಪರಬ್ರಹ್ಮ ಸಂಖ್ಯೆಯೆಂದು ಜ್ಞಾನಿಗಳು ಹೇಳುತ್ತಾರೆ. ಅದಕ್ಕಿಂತ ದೊಡ್ಡದಾದ ಏಕಸಂಖ್ಯೆ ಬೇರೊಂದಿಲ್ಲ. ಶ್ರೀ ರಾಮಕ್ಷೇತ್ರದಲ್ಲಿ ಆ ಸಂಖ್ಯೆಗೆ ವಿಶೇಷ ಮಹತ್ವ ಅಗೋಚರವಾಗಿ ಸಂದಾಯವಾಗಿದೆ. ದೇವಾಲಯದ ಕಲಾತ್ಮಕವಾದ ಗೋಪುರದ ಎತ್ತರ 126 ಅಡಿಗಳು. 1+2+6+ =9 ಎಂಬಂತೆ ಅದರೊಳಗೆ ಪೂರ್ಣಸಂಖ್ಯೆ ನಿಹಿತವಾಗಿದೆ. ಆ ಗೋಪುರವು ನೆಲದ ಮಟ್ಟದಿಂದ 117 ಅಡಿಗಳು. 1+1+7=9. ಶ್ರೀ ರಾಮ ದೇವರ ದರ್ಶನವಾಗಬೇಕಾದರೆ ಭೂ ಮಟ್ಟದಿಂದ ಮೊದಲು 54 ಮೆಟ್ಟಿಲುಗಳನ್ನು, ತರುವಾಯ ಎರಡನೆಯ ಅಂತಸ್ತಿನಿಂದ 54 ಮೆಟ್ಟಿಲುಗಳನ್ನು (5+4=9, 54+54=108=1+0+8=9) ಏರಿ ಸಾಗಬೇಕು. ಅಲ್ಲಿ ಪ್ರಧಾನವಾಗಿ 81 (8+1=9) ದೇವತಾ ಮೂರ್ತಿಗಳಿವೆ. 36 (3+6=9) ಹನುಮಂತ ರಥ 36 ಅಡಿಗಳು (3+6=9) ರಜತ ರಥ 18 ಅಡಿಗಳು (1+8=9) ಅದಕ್ಕೆ 81 ಮುಗುಳಿಗಳು. 81 ಗಂಟೆಗಳು (8+1=9).
ಆತ್ಮಾನಂದ ಸರಸ್ವತಿಗಳ ಪಟ್ಟಾಭಿಷೇಕ ಮಹೋತ್ಸವಕ್ಕೆ 54 ಮಂದಿ ಯತಿವರ್ಯರು (5+4=9) ಆಗಮಿಸಿದ್ದರು. ಸ್ವಾಮಿಗಳು 9 ಶಾಖಾ ಮಠಗಳನ್ನು ನಿರ್ಮಿಸಬೇಕೆಂದಿದ್ದಾರೆ. ಹೀಗೆ ಈ ಪೂರ್ಣಸಂಖ್ಯೆಯ ಚಮತ್ಕಾರದ ಪಟ್ಟಿ ದೊಡ್ಡದಾಗಿದೆ.
ಹೊಸ ಪರಂಪರೆಯ ಯುಗಪುರುಷ
ಆಚಾರ್ಯತ್ರಯರುಗಳಾದ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರುಗಳ ಅದ್ವೈತ, ದ್ವೈತ, ವಿಶಿಷ್ಟಾದ್ವೈತಗಳೆಂಬ ಪರಂಪರೆಗಳಿಂದ ಜಗತ್ತು ಯಾವ ರೀತಿಯ ಸುಧಾರಣೆಯನ್ನು ಕಂಡಿದೆಯೋ ಅದೇ ಮಾದರಿಯಲ್ಲಿ ಕಲಿಯುಗದಲ್ಲಿ ಪ್ರತಿಯೊಬ್ಬನೂ ತನಗೆ ಭಗವಂತ ಕೊಟ್ಟ ಯಾವುದೇ ಕರ್ಮವಿರಲಿ ಅದನ್ನು ಸ್ವಚ್ಛತೆಯಿಂದ, ದಕ್ಷತೆಯಿಂದ, ನಿಷ್ಕಾಮ ಭಾವದಿಂದ ಮಾಡುತ್ತಾ ಅಂತರಂಗದಲ್ಲಿ ಭಗವಂತನಾದ ಶ್ರೀ ರಾಮಚಂದ್ರ ದೇವರ ಮಂತ್ರ ಜಪವನ್ನು ಜಪಿಸುತ್ತಾ ಮಾನವತ್ವದಿಂದ ದೇವತ್ವವನ್ನು ಪಡೆಯಬಹುದೆಂಬ ಕರ್ಮಯೋಗ ಮತ್ತು ಭಕ್ತಿಯೋಗಗಳು ಸಮ್ಮಿಳಿತಗೊಂಡಂತಹ ಒಂದು ಹೊಸ ಪರಂಪರೆಯ ಸ್ಥಾಪನೆಗೆ ನಾಂದಿಯನ್ನು ಮಾಡಿದವರು ಶ್ರೀಗಳವರು. ದೇಶದಾದ್ಯಂತ ಭಕ್ತ ಜನರಿಂದ ಗೌರವಿಸಲ್ಪಟ್ಟು, ಪೂಜಿಸಲ್ಪಟ್ಟು ಒಂದು ಗುರುಪೀಠ ಸ್ಥಾಪನೆಯ ಒಂದು ಹೊಸ ಪರಂಪಂರೆಯ ಸ್ಥಾಪನೆಗೆ ಕಾರಣೀಭೂತರಾದವರು, ಯುಗಪುರುಷರಲ್ಲೊಬ್ಬರಾದ ಜಗದ್ಗುರು ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮಿಗಳವರು.
ಇತಿಹಾಸವು ಮುಂದುವರಿಯಿತು
ಶ್ರೀ ರಾಮಕ್ಷೇತ್ರವನ್ನು ದಕ್ಷಿಣದ ಅಯೋಧ್ಯೆಯೆಂಬಂತೆ ಕಟ್ಟಿ ಬೆಳೆಸುವಲ್ಲಿ ಆತ್ಮಾನಂದ ಸರಸ್ವತಿ ಸ್ವಾಮಿಗಳು ಕರ್ಮಯೋಗಿಗಳಾಗಿ ತಮ್ಮ ದೇಹ ಶ್ರಮವನ್ನು ಲೆಕ್ಕಿಸದೆ ಹಗಲಿರುಳೂ ಶ್ರಮಿಸಿದರು. ಹಿಂದುಳಿದ ವರ್ಗಗಳನ್ನು ಮೇಲೆ ತರುವ, ಅವರಿಗೆ ವಿದ್ಯೆಯ ಬೆಳಕನ್ನು ನೀಡುವ, ಅವರನ್ನು ಜ್ಞಾನವಂತರನ್ನಾಗಿ ರೂಪಿಸುವ, ಅವರನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ ಸೇವಾಕಾರ್ಯಗಳನ್ನು ಲೋಕೋತ್ತರವಾಗುವಂತೆ ಮಾಡಿದರೆಂಬುದು ಸರ್ವರೂ ಮನಗಂಡಿರುವ ವಿಷಯವಾಗಿದೆ. ಅವರ ಸಂಕಲ್ಪಶಕ್ತಿ ಅಪೂರ್ವವಾಗಿದ್ದುದರಿಂದ ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಏನೇ ವಿಘ್ನವುಂಟಾದರೂ ಅವುಗಳನ್ನೆಲ್ಲ ನೀಗಿಕೊಂಡು, ಯಾವುದೇ ಲೋಪವಿಲ್ಲದಂತೆ ಪೂರ್ಣಗೊಳಿಸಿ ಪುಣ್ಯಾತ್ಮರಾದರು. ಆತ್ಮಶಕ್ತಿಯಲ್ಲಿ ಯಾವುದೇ ಕೊರತೆ ತೋರಲಿಲ್ಲವಾದರೂ ವೃದ್ಧಾಪ್ಯವೇ ಕಾರಣವಾಗಿ ದೇಹಬಲವು ದಿನದಿಂದ ದಿನಕ್ಕೆ ಕುಗ್ಗುತ್ತಾ ಹೋಯಿತು. ತಾವು ಇಹಲೋಕ ಯಾತ್ರೆಯನ್ನು ಪೂರೈಸುವ ಕಾಲ ಸನ್ನಿಹಿತವಾಗುತ್ತಿದೆಯೆಂಬುದನ್ನು ಅವರು ತಮ್ಮ ದಿವ್ಯಾನುಭೂತಿಯಿಂದ ಕಂಡುಕೊಂಡರು. ‘ಶ್ರೀ ರಾಮ ಕ್ಷೇತ್ರವನ್ನು ಲೋಕಪ್ರಸಿದ್ದವಾಗುವಂತೆ, ಲೋಕೋಪಯುಕ್ತವಾಗುವಂತೆ ಮುನ್ನಡೆಸುವ ತೇಜಸ್ವಿಯಾದ ಮಹಾಪುರುಷನೊಬ್ಬನನ್ನು ನಾವು ಪಡೆದುಕೊಳ್ಳಬೇಕು’ ಎಂದು ಸತ್ಯ ಸಂಕಲ್ಪವು ಅವರ ಹೃದಯದಲ್ಲಿ ಮೂಡಿತು. ಆ ಸತ್ಸಂಕಲ್ಪವನ್ನು ನೆರವೇರಿಸುವ ಕಾಮಧೇನುವಾಗಿ ಶ್ರೀ ರಾಮಚಂದ್ರನೇ ಬ್ರಹ್ಮಾನಂದ ಸರಸ್ವತಿಗಳೆಂಬ ಪುಣ್ಯ ಪುರುಷರನ್ನು ಅವರ ಕರಕಮಲಸಂಜಾತರಾಗುವಂತೆ ಮಾಡಿದನು.
ಕಮಲಾಕ್ಷರು ಬ್ರಹ್ಮಾನಂದ ಸರಸ್ವತಿಗಳಾದರು
ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮಕ್ಕೆ ಸೇರಿದ ಇರಂತಬೆಟ್ಟು ಎಂಬ ಸಂಸ್ಕಾರವಂತ ಮನೆತನದಲ್ಲಿ ಬಾಬು ಬಂಗೇರ-ಸರಸ್ವತಿ ಅಮ್ಮ ಎಂಬ ದೈವ ಭಕ್ತ ದಂಪತಿಗಳ ಮಗನಾಗಿ ಜನಿಸಿದರು. ಸಾಮಾಜಿಕ ನೆಲೆಯಲ್ಲಿ ಬಿಲ್ಲವ ಎಂಬ ಹಿಂದುಳಿದ ವರ್ಗಕ್ಕೆ ಸೇರಿದ್ದರೂ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಆ ಕುಟುಂಬವು ತುಂಬಾ ಎತ್ತರದಲ್ಲಿತ್ತು. ಕಮಲಾಕ್ಷ ಎಂಬುದು ಬ್ರಹ್ಮಾನಂದ ಸರಸ್ವತಿಗಳ ಪೂರ್ವಾಶ್ರಮ ನಾಮವಾಗಿತ್ತು. ಅವರ ತಂದೆ ಬಾಬು ಬಂಗೇರರು ತಮ್ಮ ಬಾಲ್ಯದಿಂದಲೂ ಹಿಮಾಲಯದ ಅನೇಕ ಪುಣ್ಯ ಭೂಮಿಗಳನ್ನು ಸಂದರ್ಶಿಸಿದ ಆಧ್ಯಾತ್ಮ ಜೀವಿಯಾಗಿದ್ದರು. ಹಿರಿಯರ ಒತ್ತಾಯಕ್ಕೆ ಮಣಿದು ಗೃಹಸ್ಥಾಶ್ರಮವನ್ನು ಸ್ವೀಕರಿಸಿದ್ದರು. ಆದರೆ ಅಂತರಾಳದಲ್ಲಿ ಭಕ್ತಿಜ್ಞಾನವೈರಾಗ್ಯಗಳನ್ನು ತುಂಬಿಕೊಂಡು, ತಾವರೆಯೆಲೆಯ ಮೇಲಿನ ಜಲಬಿಂದುವಿನಂತೆ ಸಂಸಾರಕ್ಕೆ ಅಂಟಿಯೂ ಅಂಟದಂತೆ ತಮ್ಮ ಬದುಕನ್ನು ರೂಪಿಸಿಕೊಂಡಿದ್ದರು. ಅಧ್ಯಾಪಕ ವೃತ್ತಿಯನ್ನು ಅವಲಂಬಿಸಿ ನಿರಾಡಂಬರ, ಪ್ರಾಮಾಣಿಕ ಜೀವನ ಮಾರ್ಗವನ್ನು ತಮ್ಮದಾಗಿಸಿಕೊಂಡಿದ್ದರು. ಅಧ್ಯಾತ್ಮ ಸಾಧಕರಾಗಿ, ಧ್ಯಾನಯೋಗಿಯಾಗಿ ನೀರಮೇಲೆ ತೇಲುತ್ತ, ಧ್ಯಾನಸ್ಥರಾಗುವ ಸಿದ್ಧಿಯನ್ನು ಕೈವಶ ಮಾಡಿಕೊಂಡಿದ್ದರು. ಸರಸ್ವತಿ ಅಮ್ಮನವರು ಆದರ್ಶ ಗೃಹಿಣಿಯಾಗಿ ಸಂಸಾರದ ಜವಾಬ್ದಾರಿಯನ್ನು ಹೊತ್ತು, ತಮ್ಮ ಪತಿಯ ಅಧ್ಯಾತ್ಮ ಸಾಧನೆಗೆ ಸಹಕಾರಿಯಾಗಿದ್ದುಕೊಂಡಿದ್ದರು. ಸದ್ಗುರು ಶಿವಾನಂದ ಮಹಾರಾಜರು, ಸದ್ಗುರು ಅವಧೂತ ನಿತ್ಯಾನಂದ ಸ್ವಾಮಿಗಳು ಮುಂತಾದ ಮಹಾತ್ಮರ ಆಶೀರ್ವಾದಕ್ಕೆ ಪಾತ್ರರಾಗಿ ಮನೆಯಲ್ಲಿಯೇ ತಮ್ಮ ಸಾಧನೆಯನ್ನು ಬಾಬು ಬಂಗೇರರು ಮುಂದುವರಿಸಿಕೊಂಡಿದ್ದರು.
ಬಾಲ್ಯಜೀವನ ಮತ್ತು ವಿದ್ಯಾಭ್ಯಾಸ
ಬ್ರಹ್ಮಾನಂದ ಸರಸ್ವತಿಗಳ ಬಾಲ್ಯ ಜೀವನ ಆನಂದಮಯವಾಗಿತ್ತು. ಸ್ವಗ್ರಾಮವಾದ ಶಂಭೂರಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸ ನಡೆಯಿತು. ತರುವಾಯ ಸಮೀಪದ ಪಾಣೆಮಂಗಳೂರು ಎಂಬ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾ ಸಂಸ್ಥೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡರು. ಶಾಲಾದಿನಗಳಲ್ಲಿ ಜಾಣ ವಿದ್ಯಾರ್ಥಿಯಾಗಿದ್ದು, ಹೆಚ್ಚು ಹೆಚ್ಚು ಕಲಿಯಬೇಕು, ತಿಳಿಯಬೇಕು ಎಂಬ ಆಸಕ್ತಿಯಿಂದ ತುಂಬಿ ತುಳುಕುತ್ತಿದ್ದರು. ಅಷ್ಟು ಮಾತ್ರವಲ್ಲದೆ ಅಧ್ಯಾತ್ಮ ಸಾಧನೆಯ ಹಸಿವು ಕೂಡ ಅವರಲ್ಲಿ ಮನೆ ಮಾಡಿಕೊಂಡಿತ್ತು. ತಂದೆ ಬಾಬು ಬಂಗೇರರು ಪಡೆದುಕೊಂಡಿದ್ದ ಸಿದ್ಧಿಗಳಿಂದ ಅವರು ಆಕರ್ಷಿತರಾಗಿದ್ದರು. “ಅಪ್ಪಾ, ನೀವು ಹೀಗೆ ನೀರಿನ ಮೇಲೆ ತೇಲುತ್ತ ಧ್ಯಾನ ಮಗ್ನರಾಗುತ್ತೀರಲ್ಲ, ಅಂತಹ ದಿವ್ಯ ವಿದ್ಯೆಯನ್ನು ನನಗೂ ಕಲಿಸಿಕೊಡಿ, ನಾನೂ ನೀರಮೇಲೆ ತೇಲಾಡಬೇಕು, ಗಾಳಿಯಲ್ಲಿ ಹಾರಾಡಬೇಕು, ದಯವಿಟ್ಟು ಅನುಗ್ರಹಿಸಿ” ಎಂದು ಒತ್ತಾಯಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದರು. ಈ ಅಧ್ಯಾತ್ಮದ ಹಂಬಲ ತಮ್ಮ ಪುತ್ರನಲ್ಲಿ ಜನ್ಮಜಾತ ಗುಣವಾಗಿ ಬಂದಿದೆ ಎಂದು ತಂದೆಯವರು ಅರಿತುಕೊಂಡಿದ್ದರು. ಕಮಲಾಕ್ಷರ ಹದಿನಾರನೆಯ ವಯಸ್ಸಿನಲ್ಲಿ ಬಾಬು ಬಂಗೇರರು ಓಂಕಾರಮಂತ್ರದೀಕ್ಷೆಯನ್ನು, ಪ್ರಾಣಾಯಾಮ ಮತ್ತು ಧ್ಯಾನಯೋಗಗಳ ದೀಕ್ಷೆಯನ್ನು ಪ್ರೀತಿಯಿಂದ ಅನುಗ್ರಹಿಸಿದರು. “ಕಮಲಾಕ್ಷನು ಪ್ರಾಕೃತರಂತೆ ಸಂಸಾರ ಬಂಧನಕ್ಕೆ ಒಳಗಾಗುವವನಲ್ಲ, ಅವನದು ನಿವೃತ್ತಿ ಮಾರ್ಗ, ಪ್ರವೃತಿ ಮಾರ್ಗಕ್ಕೆ ಬಲವಂತದಿಂದ ಎಳೆದುತರುವ ಪ್ರಯತ್ನ ಮಾಡಬೇಡಿ” ಎಂದು ತಂದೆಯವರು ಆಗಲೇ ಘೋಷಿಸಿಬಿಟ್ಟಿದ್ದರು.
ಬ್ರಹ್ಮಾನಂದ ಸರಸ್ವತಿಗಳ ಕಾಲೇಜು ವಿದ್ಯಾಭ್ಯಾಸವು ತಾಲೂಕು ಕೇಂದ್ರವಾದ ಬಂಟ್ವಾಳ ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ಮುಂದುವರಿಯಿತು. ಪದವಿಪೂರ್ವ ಶಿಕ್ಷಣದ ತರುವಾಯ ಅಲ್ಲಿಯೇ ಬಿ.ಎ. ತರಗತಿಯ ವಿದ್ಯಾರ್ಥಿಯಾದರು. ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳನ್ನು ಅಧ್ಯಯನದ ವಿಶೇಷ ವಿಷಯಗಳನ್ನಾಗಿ ಆಯ್ದುಕೊಂಡು ಬಿ.ಎ. ಪದವೀಧರಾದರು. ಅಷ್ಟಕ್ಕೇ ತೃಪ್ತರಾಗದೆ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಿ, ಸಮಾಜಶಾಸ್ತ್ರಕ್ಕೊಲಿದು, ಮಾಸ್ಟರ್ ಆಫ್ ಆರ್ಟ್ಸ್ ಎಂಬ ಸ್ನಾತಕೋತ್ತರ ಪದವಿಯನ್ನು ತಮ್ಮದಾಗಿಸಿಕೊಂಡರು. ಬ್ರಹ್ಮಾನಂದರ ಜ್ಞಾನದಾಹ ಅಲ್ಲಿಗೇ ತಗ್ಗಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಪಟ್ಟಣವಾದ ಮಂಗಳೂರನ್ನು ಹೊಕ್ಕು, ಅಲ್ಲಿನ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜನ್ನು ಸೇರಿಕೊಂಡು, ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡಿ, ಎಲ್.ಎಲ್.ಬಿ. ಪದವಿಗೆ ಪ್ರಭುಗಳಾದರು.
ಕೈಬೀಸಿ ಕರೆದ ಕಾರ್ಯಕ್ಷೇತ್ರಗಳು
ಉತ್ಸಾಹಶೀಲರೂ, ಕಾರ್ಯದಕ್ಷರೂ, ಪ್ರಾಮಾಣಿಕರೂ ಆಗಿದ್ದ ಬ್ರಹ್ಮಾನಂದ ಸರಸ್ವತಿಗಳನ್ನು ವಿವಿಧ ಕಾರ್ಯಕ್ಷೇತ್ರಗಳು ಕೈಬೀಸಿ ಕರೆದವು. ಮೊದಲಿಗೆ ಅವರು ಕರ್ನಾಟಕ ಸರ್ಕಾರದ ಆಗ್ರೋ ಇಂಡಸ್ಟ್ರೀಸ್ ಇಲಾಖೆಯ ನಿರ್ದೇಶಕರಾಗಿ 4 ವರ್ಷಗಳ ಕಾಲ ರಾಜಧಾನಿ ಬೆಂಗಳೂರಲ್ಲಿ ಕಾರ್ಯತತ್ಪರರಾದರು. ಬ್ರಹ್ಮಾನಂದರು ಈಶ್ವರಾರ್ಪಣ ಬುದ್ಧಿಯಿಂದ ತಮ್ಮ ಕರ್ತವ್ಯಗಳನ್ನು ಈ ನಾಲ್ಕು ವರ್ಷಗಳಲ್ಲಿ ನಿರ್ವಹಿಸಿದ್ದರು. ತನ್ಮೂಲಕ ಆಡಳಿತ ನಿರ್ವಹಣೆಯಲ್ಲಿ ಅಪಾರವಾದ ಅನುಭವವನ್ನು ಸಂಪಾದಿಸಿಕೊಂಡರು. ಸದಾ ಆಧ್ಯಾತ್ಮವನ್ನೇ ಚಿಂತಿಸುತ್ತಿದ್ದ ಇವರು ಅನಿವಾರ್‍ಯ ಕಾರಣಗಳಿಂದ ಈ ಉದ್ಯೋಗವನ್ನು ತೊರೆದುಬಿಟ್ಟರು. ಆ ಹೊತ್ತಿಗೆ ಸರಿಯಾಗಿ ಮಂಗಳೂರಿನಲ್ಲಿ ಪೆಟ್ರೋಕೆಮಿಕಲ್ ರಿಫೈನರಿ (ಎಂ.ಆರ್.ಪಿ.ಎಲ್.) ಹೊಸದಾಗಿ ಪ್ರಾರಂಭವಾಗಿ ಅದು ದಕ್ಷ, ಪ್ರಾಮಾಣಿಕ ಅಧಿಕಾರಿಯೊಬ್ಬನ್ನನು ಎದುರುನೋಡುತ್ತಿತ್ತು ಬ್ರಹ್ಮಾನಂದರು ಆ ಸಂಸ್ಥೆಯ ಕಮ್ಯುನಿಟಿ ಡೆವಲಪ್‌ಮೆಂಟ್ ಆಫೀಸರ್ ಆಗಿ ಕೆಲ ಸಮಯದವರೆಗೆ ಜವಾಬ್ದಾರಿ ಹೊತ್ತುಕೊಂಡರು. ಅಲ್ಲಿಯೂ ಮನಸ್ಸಿಗೆ ಶಾಂತಿ ಸಿಗಲಿಲ್ಲವೆಂಬ ಕಾರಣದಿಂದ ತರುವಾಯ ಸರ್ಕಾರಿ ಉದ್ಯೋಗದ ಹಂಗೇಬೇಡ, ಸ್ವತಂತ್ರವಾದ ಯಾವುದಾದರೂ ಉದ್ಯೋಗ ಮಾಡೋಣ, ಆತ್ಮಾರಾಮನಾಗಿರೋಣ ಎಂಬ ಹಂಬಲ ಸ್ವಾಮೀಜಿಯ ಮನದಲ್ಲಿ ದಿನದಿಂದ ದಿನಕ್ಕೆ ಪ್ರಬಲವಾಗತೊಡಗಿತು.
ಆ ಸಂದರ್ಭಕ್ಕೆ ಕೂಡುವಂತೆ ಸ್ವಾಮಿಗಳ ಎಲ್‌ಎಲ್‌ಬಿ ಕಾನೂನು ಪದವಿ ನೆರವಿಗೆ ಬಂದಿತು. ಮಂಗಳೂರಿನಲ್ಲಿಯೇ ನ್ಯಾಯವಾದಿ ವೃತ್ತಿಯನ್ನು ಕೈಗೆತ್ತಿಕೊಂಡರು. ಸುಪ್ರಸಿದ್ಧ ನ್ಯಾಯವಾದಿಗಳಾದ ಶ್ರೀ ಪುರುಷೋತ್ತಮ ಪೂಜಾರಿಯವರ ಮಾರ್ಗದರ್ಶನ ಅವರಿಗೆ ಲಭ್ಯವಾಯಿತು. ಹತ್ತು ವರ್ಷಗಳ ಕಾಲ ತ್ರಿಕರಣಶುದ್ಧಿಯಿಂದ ಆ ಕಾಯಕವನ್ನು ನಿರ್ವಹಿಸಿದರು. ಆದರೂ ಮನಸ್ಸಿಗೆ ಶಾಂತಿಯೆಂಬುದಿರಲಿಲ್ಲ, ಹರ್ಷವೆಂಬುದಿರಲಿಲ್ಲ. ಮಹಾತ್ಮಾ ಗಾಂಧೀಜಿಯವರಿಗೆ ಹೇಗೋ ಹಾಗೆಯೇ ನ್ಯಾಯವಾದಿ ವೃತ್ತಿಯು ಸ್ವಾಮೀಜಿಯವರಿಗೆ ಕ್ರಮಕ್ರಮವಾಗಿ ಜುಗುಪ್ಸೆಯನ್ನುಂಟುಮಾಡಿತು. ಸುಳ್ಳು ಹೇಳಬೇಕಲ್ಲ, ಸುಳ್ಳು ಹೇಳಿಸಬೇಕಲ್ಲ, ಧರ್ಮ, ಸತ್ಯ, ನ್ಯಾಯನೀತಿಗಳಿಗೆ ಮನ್ನಣೆಯಿಲ್ಲವಲ್ಲ, ನ್ಯಾಯದೇವತೆಯ ಆಲಯವು ಮಲಿನವಾಗುತ್ತಿದೆಯಲ್ಲ ಎಂಬ ಸಂಕಟ ಅವರನ್ನು ಕಾಡತೊಡಗಿತು. ಮಾನಸಿಕವಾಗಿ ಒಳಗೊಳಗೇ ತಳಮಳಗೊಳ್ಳುತ್ತಿದ್ದ ಅವರು ‘ಸತ್ಯಮಾರ್ಗವನ್ನು ಹೇಗೆ ಕಂಡುಕೊಂಡೇನು, ಶಾಂತಿಮಾರ್ಗವನ್ನು ಹೇಗೆ ಕಂಡುಕೊಂಡೇನು?’ ಎಂದು ಚಿಂತನೆ ನಡೆಸುತ್ತಲೇ ಇದ್ದರು.
ಮಹಾತ್ಮರ ಸೇವಾಭಾಗ್ಯ ದೊರಕಿತು
ಜೀವನೋಪಾಯಕ್ಕಾಗಿ ಸರ್ಕಾರಿ ಉದ್ಯೋಗವನ್ನಾಗಲಿ, ನ್ಯಾಯವಾದಿ ವೃತ್ತಿಯನ್ನಾಗಲಿ ಮಾಡುವಾಗಲೂ ಬ್ರಹ್ಮಾನಂದ ಸ್ವಾಮಿಗಳಿಗೆ ಅಧ್ಯಾತ್ಮದ ಹಸಿವು ಜಾಗೃತವಾಗಿಯೇ ಇತ್ತು. ದಿನನಿತ್ಯ ತನ್ನ ಅನುಷ್ಠಾನಗಳನ್ನು ತಪ್ಪದೇ ಪಾಲಿಸುತ್ತಿದ್ದರು. ಗೃಹಸ್ಥಾಶ್ರಮವನ್ನು ಪ್ರವೇಶಿಸದೆ, ನೈಷ್ಠಿಕ ಬ್ರಹ್ಮಚರ್ಯದಲ್ಲಿಯೇ ಇದ್ದುಕೊಂಡು, ತಮ್ಮ ತಂದೆಯವರಿಂದ ಪಡೆದುಕೊಂಡಿದ್ದ ಓಂಕಾರ ದೀಕ್ಷೆ, ಧ್ಯಾನದೀಕ್ಷೆಗಳನ್ನು ಮರೆಯದೆ, ಸಾಧನೆಯಲ್ಲಿ ತತ್ಪರರಾಗಿರುತ್ತಿದ್ದರು. ಶ್ರೀರಾಮಕ್ಷೇತ್ರದ ಸದ್ಗುರು ಆತ್ಮಾನಂದ ಸರಸ್ವತಿಗಳಿಗೆ ನಿತ್ಯಾನಂದ ಮಹಾರಾಜರು ಮಾರ್ಗದರ್ಶಕರಾಗಿದ್ದುದು ಸರಿಯಷ್ಟೆ. ಆ ನಿತ್ಯಾನಂದರ ಶಿಷ್ಯಕೋಟಿಯಲ್ಲಿ ಗೋವಿಂದಸ್ವಾಮಿಗಳೆಂಬುವವರು ಅತ್ಯಂತ ಶ್ರೇಷ್ಠ ಸಾಧಕರಾಗಿದ್ದರು. ಅಪಾರ ಕರುಣಾಮೂರ್ತಿಗಳೂ ಆಗಿದ್ದ ಅವರು ಬಂಟ್ವಾಳ ತಾಲೂಕಿನ ಬಡ್ಡಕಟ್ಟೆ ಎಂಬ ಗ್ರಾಮದಲ್ಲಿ ತಪೋಮಯ ಜೀವನವನ್ನು ನಡೆಸುತ್ತಿದ್ದರು. ತಮ್ಮ ಪೂರ್ವಪುಣ್ಯದ ಫಲವಾಗಿ ಬ್ರಹ್ಮಾನಂದ ಸರಸ್ವತಿಗಳು ಆ ಮಹಾತ್ಮರನ್ನು ಆಶ್ರಯಿಸಿ, ತಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಂಡರು. ‘ಧ್ಯಾನಮಾಡು’ ಎಂಬ ಆ ಸಾಧುಗಳ ಆಜ್ಞಾವಾಕ್ಯವನ್ನು ತಲೆಯಲ್ಲಿ ಹೊತ್ತು, ಈ ಮೊದಲೇ ಕ್ರಿಯಾಶೀಲವಾಗಿದ್ದ ಧ್ಯಾನಮಾರ್ಗಕ್ಕೆ ತಮ್ಮನ್ನು ಗುರುಸನ್ನಿಧಿಯಲ್ಲಿ ಸಮರ್ಪಿಸಿಕೊಂಡು ಯಶಸ್ಸನ್ನು ಗಳಿಸಿದರು. ಎರಡು ವರ್ಷ ಆ ಸಾಧನಾಮಾರ್ಗದಲ್ಲಿಯೇ ಕಳೆಯಿತು. ತಮ್ಮ ಸಾಧನೆಯ ಬಲದಿಂದ ಬ್ರಹ್ಮಾನಂದರು ಗೋವಿಂದ ಸ್ವಾಮೀಜಿಗಳ ಪೂರ್ಣಾನುಗ್ರಹಕ್ಕೆ ಪಾತ್ರರಾದರು. ಆ ಗುರುಗಳು ‘ಶಕ್ತಿಪಾತ’ದ ಮೂಲಕ ತಮ್ಮ ತಪೋ ಬಲದಿಂದ ಬ್ರಹ್ಮಾನಂದರನ್ನು ಆಶೀರ್ವದಿಸಿ “ಹೀಗೆಯೇ ನಿನ್ನ ಸಾಧನೆ ಮುಂದುವರಿಯಲಿ” ಎಂದು ಅನುಗ್ರಹಿಸಿದರು.
ಬದುಕಿನಲ್ಲಿ ಸುವರ್ಣಾಧ್ಯಾಯ ತೆರೆಯಿತು
ಅಲ್ಲಿಂದ ಮುಂದಕ್ಕಂತೂ ಬ್ರಹ್ಮಾನಂದರ ಬದುಕಿನಲ್ಲಿ ಸುವರ್ಣ ಅಧ್ಯಾಯ ತೆರೆಯಾಯಿತು. ಬೆಳಗಾವಿ ಜಿಲ್ಲೆಯ ಬೇವಿನ ಕೊಪ್ಪ ಎಂಬ ಗ್ರಾಮದ ವಿಜಯಾನಂದ ಸ್ವಾಮಿಗಳೆಂಬ ಮಹಾನ್ ತಪಸ್ವಿ ಪುಣ್ಯಪುರುಷರ ಸಂಪರ್ಕವನ್ನು ಸಾಧಿಸಿಕೊಂಡು ಆ ಭಾಗದ ಅನೇಕ ಸಿದ್ಧ ಭೂಮಿಗಳನ್ನು ದರ್ಶನ ಮಾಡಿದರು. ಭಗವಂತನ ಅನುಗ್ರಹದಿಂದ ಭರತ ಖಂಡದ ಉದ್ದಗಲಕ್ಕೂ ಸಂಚರಿಸಿ ಪವಿತ್ರ ಪುಣ್ಯಕ್ಷೇತ್ರಗಳಾದ ನೇಪಾಲದ ಪಶುಪತಿನಾಥ, ಚೈನಾದ ಮಾನಸ ಸರೋವರ ಕೈಲಾಸಯಾತ್ರೆ, ಬದರೀನಾಥ, ಕೇದಾರನಾಥ, ಗಂಗೋತ್ರಿ, ಯಮುನೇತ್ರಿ, ಅಮರನಾಥ, ಹರಿದ್ವಾರ, ಹೃಷಿಕೇಶ, ನೀಲಕಂಠ ಪರ್ವತ, ಕಾಶ್ಮೀರ ವೈಷ್ಣೋದೇವಿ, ಸಿಮ್ಲಾ, ಹಿಮಾಚಲ-ವ್ಯಾಸಗುಹೆ, ಕುರುಕ್ಷೇತ್ರ ಹಾಗೂ ಭಾರತದ ಎಲ್ಲಾ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ, ನೈಮಿಶಾರಣ್ಯ, ಚಿತ್ರಕೂಟ, ಅಯೋಧ್ಯೆ, ವಾರಣಾಸಿ, ಪ್ರಯೋಗ್‌ರಾಜ್, ರಾಜಸ್ಥಾನದ ಪುಷ್ಕರ, ವಿಂದ್ಯಾಚಲ, ದತ್ತಾತ್ರೇಯರ ತಪೋಭೂಮಿ, ಜುನಾಗಡ್, ಗಿರಿನಾರ್ ಪರ್ವತ, ಮಥುರಾ, ಬೃಂದಾವನ, ದ್ವಾರಕ ಪುರಿಜಗನ್ನಾಥ ರಾಮೇಶ್ವರ ಹೀಗೆ ಭಾರತದ ಎಲ್ಲಾ ಪುಣ್ಯಕ್ಷೇತ್ರಗಳನ್ನು ಸಂದರ್ಶನ ಮಾಡಿದರಲ್ಲದೆ, ಅನೇಕ ಸಾಧಕರ, ಸಿದ್ಧರ, ಋಷಿ-ಮುನಿಗಳ ಕೃಪಾಶೀರ್ವಾದಕ್ಕೆ ಪಾತ್ರರಾದರು. ಯತಿ ಜೀವನಕ್ಕೆ ಬೇಕಾದ ಅರ್ಹತೆಗಳನ್ನೆಲ್ಲಾ ಈ ಯಾತ್ರಾ ಕಾಲದಲ್ಲಿ ಸ್ವಾಮಿಗಳು ಸಂಪಾದಿಸಿಕೊಂಡರು.
ಮಾನವ ಪದವಿಯಿಂದ ದೇವಮಾನವ ಪದವಿಗೆ
ಬ್ರಹ್ಮಾನಂದ ಸರಸ್ವತಿಗಳು ಶ್ರೀ ರಾಮಕ್ಷೇತ್ರದ ಆತ್ಮಾನಂದ ಸರಸ್ವತಿಗಳ ಸಂಪರ್ಕಕ್ಕೆ 2008 ರಲ್ಲಿಯೇ ಬಂದಿದ್ದರಾದರೂ 2009 ನೆಯ ಜನವರಿ ತಿಂಗಳಿನ 11ನೆಯ ತಾರೀಖಿನ ಮಂಗಳಕರವಾದ ದಿನದಂದು ಸಂಪೂರ್ಣವಾಗಿ ತಮ್ಮನ್ನು ಆ ಮಹಾಗುರುವಿನ ಚರಣಕಮಲಗಳಿಗೆ ಸಮರ್ಪಿಸಿಕೊಂಡರು. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳನ್ನು ಮಾನವಜೀವನದ ಉತ್ಕರ್ಷಕ್ಕೆಂದು ಸನಾತನಧರ್ಮವು ಬೋಧಿಸಿಕೊಂಡು ಬಂದಿದೆ. ಆ ಪೈಕಿ ಜನನ ಮರಣಗಳಿಂದ ಮುಕ್ತರಾಗುವ ಮೋಕ್ಷವೆಂಬ ಪುರುಷಾರ್ಥವು ಅತ್ಯಂತ ಶ್ರೇಷ್ಠವಾದುದರಿಂದ ಅದನ್ನು ಪರಮಪುರುಷಾರ್ಥವೆಂದು ಪರಿಗಣಿಸಲಾಗಿದೆ. ಅಂತೆಯೇ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸನ್ಯಾಸ ಎಂಬ ನಾಲ್ಕು ಆಶ್ರಮಗಳನ್ನು ಸನಾತನಧರ್ಮವು ಮಾನವಜೀವಿತಕ್ಕೆ ನಿಗದಿಗೊಳಿಸಿದೆ. ಬ್ರಹ್ಮಚರ್ಯದಲ್ಲಿ ವಿದ್ಯೆ ಕಲಿಯುವುದು, ಗಾರ್ಹಸ್ಥ್ಯದಲ್ಲಿ ವಿವಾಹಿತನಾಗಿ ಭೋಗಭಾಗ್ಯಗಳನ್ನು ಅನುಭವಿಸುತ್ತ ಸತ್ ಸಂತಾನವನ್ನು ಪಡೆಯುವುದು, ವಾನಪ್ರಸ್ಥದಲ್ಲಿ ಅರಣ್ಯವಾಸಿಯಾಗಿ ತಪಸ್ಸನ್ನು ಆಚರಿಸುವುದು, ಕೊನೆಗೆ ಸನ್ಯಾಸವನ್ನು ಸ್ವೀಕರಿಸಿ ಆತ್ಮಜ್ಞಾನಿಯಾಗಿ ಯೋಗಮಾರ್ಗದಿಂದ ದೇಹತ್ಯಾಗ ಮಾಡುವುದು ಎಂಬಿವು ಆಯಾ ಆಶ್ರಮಗಳಿಗೆ ನಿಗದಿಗೊಳಿಸಿದ ಧರ್ಮಗಳೂ ಆಗಿವೆ. ಮಹಾಕವಿ ಕಾಳಿದಾಸನು ತನ್ನ ’ರಘುವಂಶ’ವೆಂಬ ಮಹಾಕಾವ್ಯದಲ್ಲಿ ರಘುವಂಶದ ಮಹಾರಾಜರಿಗೆ ಈ ಆಶ್ರಮಧರ್ಮವನ್ನು ಅನ್ವಯಿಸಿ ಹೀಗೆ ಹೇಳಿದ್ದಾನೆ.
ಶೈಶವೇ ಅಭ್ಯಸ್ತ ವಿದ್ಯಾನಾಂ | ಯೌವನೇ ವಿಷಯೈಷಿಣಾಂ |
ವಾರ್ಧಕ್ಯೇ ಮುನಿವೃತ್ತೀನಾಂ | ಯೋಗೇನಾಂತ್ ತನುತ್ಯಜಾಂ ||
ಬ್ರಹ್ಮಾನಂದ ಸರಸ್ವತಿಗಳಾದರೋ ಬ್ರಹ್ಮಚರ್ಯದಲ್ಲಿ ಶಾಲಾ ಕಾಲೇಜುಗಳ ಲೌಕಿಕ ವಿದ್ಯೆಯನ್ನು ಗಳಿಸಿಕೊಂಡರು. ಅದರೊಟ್ಟಿಗೇ ತಮ್ಮ ತಂದೆಯವರಿಂದ ಆಧ್ಯಾತ್ಮ ವಿದ್ಯೆಯಲ್ಲಿಯೂ ದೀಕ್ಷಿತರಾದರು. ಸತ್ಪುರುಷರ ಸತ್ಸಂಗದಿಂದ ಆಧ್ಯಾತ್ಮ ಸಾಧನೆಯಲ್ಲಿ ಬಹಳ ಎತ್ತರಕ್ಕೇರಿದರು. ತರುವಾಯ ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮಗಳೆಂಬ ಹಂತಗಳನ್ನು ಅತಿಕ್ರಮಿಸಿ ನೇರವಾಗಿ ಸನ್ಯಾಸಾಶ್ರಮವನ್ನು ಪ್ರವೇಶಿಸಿ ಬಿಟ್ಟರು. ಆತ್ಮಾನಂದ ಸರಸ್ವತಿಗಳೇ ಅವರಿಗೆ ಸನ್ಯಾಸದೀಕ್ಷೆಯನ್ನು ಅನುಗ್ರಹಿಸಿ, ಕಮಲಾಕ್ಷ ಎಂಬ ಬ್ರಹ್ಮಚರ್ಯಾಶ್ರಮ ನಾಮವನ್ನು ಮರೆಮಾಡಿ, ತಮ್ಮ ಅಂತರಂಗದ ಶಿಷ್ಯರನ್ನಾಗಿ ಮಾಡಿಕೊಂಡರು, ತಮ್ಮ ಕರಕಮಲಸಂಜಾತರನ್ನಾಗಿ ಮಾಡಿಕೊಂಡರು. ಯೋಗಸಾಧನೆ, ರಾಜಯೋಗದ ಧ್ಯಾನಸಾಧನೆಗಳಲ್ಲಿ ಈ ಮೊದಲೇ ಬ್ರಹ್ಮಾನಂದವನ್ನು ಅನುಭವಿಸುತ್ತಿದ್ದ ಅವರಿಗೆ, ಆ ಸನ್ಯಾಸಾಶ್ರಮನಾಮವು ಸಾರ್ಥಕವಾಯಿತು. ಕಮಲಾಕ್ಷ ಎಂದರೆ ‘ಕಮಲಪುಷ್ಪದಂತೆ ವಿಶಾಲವಾದ ಕಣ್ಣುಗಳುಳ್ಳವನು’ ಎಂದರ್ಥ. ಅದು ಮಹಾವಿಷ್ಣುವಿನ ಪರ್ಯಾಯ ನಾಮಗಳಲ್ಲೊಂದು. ಮುಂದೆ ಮಹಾತ್ಮರಾಗುತ್ತಾರೆಂಬುದಕ್ಕೆ ಆ ಪೂರ್ವಾಶ್ರಮ ಪುಣ್ಯ ನಾಮವೇ ಸಾಕ್ಷಿಯಾಗಿತ್ತು. ಸನ್ಯಾಸಧರ್ಮವನ್ನು ಸ್ವೀಕರಿಸಿದ ಆ ಶುಭದಿನವಾದರೋ ಬ್ರಹ್ಮಾನಂದ ಸರಸ್ವತಿಗಳು ಮಾನವ ಪದವಿಯಿಂದ ದೇವಮಾನವ ಪದವಿಗೆ ಏರಿದ ದಿನವಾಯಿತು; ಜಿeಸು ಪದವಿಯಿಂದ ಮುಮುಕ್ಷು ಪದವಿಗೆ ಏರಿದ ದಿನವಾಯಿತು; ದೇಹಾತ್ಮ ಭಾವವನ್ನು ಕಳಚಿ ಬ್ರಹ್ಮಾತ್ರಭಾವವನ್ನು ಅನುಭವಿಸಿದ ದಿನವಾಯಿತು; ಅವೆಲ್ಲದರ ಜೊತೆಗೆ ಹಿಂದುಳಿದ ವರ್ಗಗಳ ಉದ್ಧಾರದ ದೀಕ್ಷೆಯನ್ನು ತಳೆದ ಪರಮಮಂಗಳ ದಿನವಾಯಿತು. ‘ಆತ್ಮನೋ ಮೋಕ್ಷಾರ್ಥಂ ಜಗದ್‌ಹಿತಾಯಚ’ ‘ಆತ್ಮಸಾಧನೆಯ ಮೋಕ್ಷದ ಜೊತೆಗೆ ಜಗತ್ತಿನ ಹಿತವನ್ನೂ ಸಾಧಿಸಬೇಕು’ ಎಂಬುದು ಆ ಮಾತಿನ ಅರ್ಥ. ಅದು ವಿವೇಕಾನಂದರ ವಾಣಿ. ಅದು ಬ್ರಹ್ಮಾನಂದ ಸರಸ್ವತಿಗಳ ಜೀವಿತದಲ್ಲಿ ಅಂದಿಗೆ ಚರಿತಾರ್ಥವಾಯಿತು.
ಆತ್ಮಾನಂದ ಸರಸ್ವತಿಗಳು ಬ್ರಹ್ಮೀಭೂತರಾದರು
ಬ್ರಹ್ಮಾನಂದ ಸರಸ್ವತಿಗಳು ತಮ್ಮ ಗುರುಗಳ ಅನುಜ್ಞೆಯಂತೆ ಹಿಮಾಲಯದ ದಿವ್ಯಧಾಮಗಳಲ್ಲೊಂದಾದ ಕೈಲಾಸಮಾನಸ ಸರೋವರದ ಯಾತ್ರೆಯನ್ನು 15-6-2009 ರಂದು ಕೈಗೊಂಡರು. ಅದು ಯಶಸ್ವಿಯಾಯಿತು. ಅಲ್ಲಿಂದ ಹಿಮಾಲಯದ ಇನ್ನಿತರ ಪ್ರಮುಖ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಅಣಿಯಾಗುತ್ತಿದ್ದಂತೆಯೇ ಇತ್ತ ಶ್ರೀರಾಮಕ್ಷೇತ್ರದಲ್ಲಿ ಆತ್ಮಾನಂದ ಸರಸ್ವತಿಗಳು ಬ್ರಹ್ಮೀಭೂತರಾಗಲಿದ್ದಾರೆಂಬ ಸುದ್ದಿ ಬಂದಿತು. ಆಗ ಬ್ರಹ್ಮಾನಂದರು ತಮ್ಮ ಯಾತ್ರೆಯನ್ನು ಅಲ್ಲಿಗೇ ಸಮಾರೋಪಗೊಳಿಸಿ ಶ್ರೀರಾಮಕ್ಷೇತ್ರಕ್ಕೆ ಮರಳಿದರು. ತಮಗೆ ಅಂತ್ಯಕಾಲ ಸಮೀಪಿಸುತ್ತಿದೆಯೆಂಬುದನ್ನು ಮೊದಲೇ ಅರಿತಿದ್ದ ಆತ್ಮಾನಂದರು, ಯಾತ್ರೆಯಿಂದ ಬ್ರಹ್ಮಾನಂದರು ಆಗಮಿಸಿದ ಒಂದು ವಾರದ ನಂತರ ನಿರ್ಮಲಾಂತಃಕರಣದಿಂದ ದೇಹತ್ಯಾಗ ಮಾಡಿ, ಬ್ರಹ್ಮವಸ್ತುವಿನಲ್ಲಿ ಒಂದಾಗಿಬಿಟ್ಟರು.
ಬ್ರಹ್ಮಾನಂದ ಸರಸ್ವತಿಗಳು ದುಃಖತಪ್ತರಾದರೂ ಮುಂದಿನ ಕ್ರಿಯಾಚರಣೆಗಳಿಗೆ ತಮ್ಮನ್ನು ಅಣಿಗೊಳಿಸಿಕೊಂಡರು. 48 ದಿನಗಳ ಒಂದು ಮಂಡಲಪರ್‍ಯಂತ ವಿಶೇಷ ಪೂಜಾಕಾರ್ಯಗಳನ್ನು ಸಾಂಗವಾಗಿ ನೆರವೇರಿಸಿ, 48ನೆಯ ದಿನದಂದು ಅಂದರೆ 3-9-2009 ರಂದು ವೈದಿಕ ವಿಧಿವಿಧಾನಗಳನ್ನು ಅನುಸರಿಸಿದ ‘ಯತಿಪೂಜೆ’ಯನ್ನು ಪಾದಪೂಜಾಸಹಿತವಾಗಿ ಹೃದಯಸ್ಪರ್ಶಿಯಾಗಿ ಸಂಪನ್ನಗೊಳಿಸಿದರು.
ಬ್ರಹ್ಮಾನಂದ ಸರಸ್ವತಿಗಳ ಕಿರೀಟಧಾರಣಾಮಹೋತ್ಸವ
ಯತಿಪೂಜೆಯ ದಿನದಂದೇ ಗುರುದೇವಮಠದ ಭಕ್ತವೃಂದದವರು ಬ್ರಹ್ಮಾನಂದ ಸರಸ್ವತಿಗಳನ್ನು ಆತ್ಮಾನಂದ ಸರಸ್ವತಿಗಳ ಉತ್ತರಾಧಿಕಾರಿಗಳಾಗುವಂತೆ ಪೀಠಾರೋಹಣ ಮಾಡಿಸಿ, ಪಟ್ಟಾಭಿಷೇಕ ಮಹೋತ್ಸವವನ್ನು ರತ್ನಖಚಿತ ಕಿರೀಟಧಾರಣೆಯ ಮೂಲಕವಾಗಿ ಭಕ್ತಿಯಿಂದ ನೆರವೇರಿಸಿದರು. ಅದು ವೈಭವಪೂರ್ಣವಾದ, ಹೃದಯಸ್ಪರ್ಶಿಯಾದ ಸಮಾರಂಭವಾಗಿ, ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಪರಂಪರೆಯ ಚರಿತ್ರೆಯಲ್ಲಿ, ಸುವರ್ಣಾಕ್ಷರಗಳಿಂದ ಬರೆದಿಡುವ ದಿನವಾಯಿತು. ಕನ್ನಡನಾಡಿನ ಎಲ್ಲಾ ಜಿಲ್ಲೆಗಳಿಂದಲೂ ಸದ್ಭಕ್ತರು ಆ ಮಹೋತ್ಸವಕ್ಕೆ ಆಗಮಿಸಿ, ಬ್ರಹ್ಮಾನಂದ ಸರಸ್ವತಿ ಮಹಾರಾಜರ ಮತ್ತು ಆ ಮಹಾಪರ್ವಕ್ಕೆಂದು ಕ್ಷೇತ್ರಕ್ಕೆ ಪಾದಬೆಳೆಸಿದ್ದ ಅನೇಕ ಯತಿವರ್ಯರ ದರ್ಶನಾಶೀರ್ವಾದಗಳನ್ನು ಪಡೆದು ಧನ್ಯರಾದರು.
ಪರಮಪೂಜ್ಯ ಗುರುಗಳಾದ ಶ್ರೀ ಕ್ಷೇತ್ರಕೊಲ್ಯದ ರಾಜಯೋಗಿ ರಮಾನಂದ ಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನದ ಶಿವಮೊಗ್ಗ ಶಾಖಾಮಠದ ಪ್ರಸನ್ನನಾಥ ಸ್ವಾಮಿಗಳು ಮತ್ತು ಮಾತಾನಂದಮಯಿ ಸ್ವಾಮಿಗಳು, ಬಲ್ಯೊಟ್ಟು ಶ್ರೀ ಕ್ಷೇತ್ರದ ವಿಖ್ಯಾತಾನಂದ ಸ್ವಾಮಿಗಳು, ಬೆಳಗಾವಿ ಜಿಲ್ಲೆಯ ಬೇವಿನಕೊಪ್ಪದ ಆನಂದಾಶ್ರಮದ ವಿಜಯಾನಂದ ಸ್ವಾಮಿಗಳು, ಮಾಣಿಲದ ಶ್ರೀಧಾಮದ ಮೋಹನದಾಸ ಸ್ವಾಮಿಗಳು, ಆದಿಚುಂಚನಗಿರಿ ಮಠಾದೀಶರಾದ ಧರ್ಮಪಾಲನಾಥ ಸ್ವಾಮಿಗಳು, ಕೇಮಾರು ಸಾಂದೀಪನಿ ಆಶ್ರಮದ ಈಶವಿಠಲಾನಂದ ಸ್ವಾಮಿಗಳು, ಮಂಗಳೂರಿನ ಕದ್ರಿಯ ಕದಳಿಯೋಗೀಶ್ವರ ಮಠದ ರಾಜಯೋಗಿ ಸಂಧ್ಯಾನಾಥ ಸ್ವಾಮಿಗಳು, ಪೊಳಲಿಯ ದೇವರಗುಡ್ಡೆಯ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು, ಕರಿಂಜೆಯ ಸತ್ಯನಾರಾಯಣ ವೀರಾಂಜನೆಯ ದೇವಸ್ಥಾನದ ಮುಕ್ತಾನಂದ ಸ್ವಾಮಿಗಳು, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮಿಗಳು, ಮಧ್ಯಪ್ರದೇಶದ ಅಮರಕಂಟಕದ ಶ್ರದ್ಧಾನಂದ ಸ್ವಾಮಿಗಳು ಆ ಮಹೋತ್ಸವದಲ್ಲಿ ಪಾಲ್ಗೊಂಡು, ನೂತನವಾಗಿ ಪಟ್ಟವೇರಿದ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಗೆ ಶುಭವನ್ನು ಹಾರೈಸಿದರು, ಹಿಂದುಳಿದ ವರ್ಗಗಳ ಆಶೋತ್ತರಗಳನ್ನು ಈಡೇರಿಸುವ ದಿವ್ಯಜ್ಯೋತಿಯಾಗಿ ಬೆಳಗಲೆಂಬ ಕಳಕಳಿಯನ್ನು ವ್ಯಕ್ತಪಡಿಸಿದರು.
“ಸಮಕಾಲೀನ ಸನ್ನಿವೇಶದಲ್ಲಿ ಧರ್ಮ ಮತ್ತು ರಾಜಕಾರಣಗಳು ಒಂದಕ್ಕೊಂದು ಪೂರಕವಾಗಿ ಸಾಗುವ ಅಗತ್ಯವಿದೆ. ಪ್ರಪಂಚವೆಂಬ ಮನೆಯಲ್ಲಿ ಭಾರತವು ದೇವರ ಕೋಣೆ ಇದ್ದ ಹಾಗೆ. ಶಾಂತಿಯನ್ನು ಅರಸುವ ಹಿನ್ನೆಲೆಯಲ್ಲಿ ವಿದೇಶಿಯರೂ ಇಂದು ಭಾರತದತ್ತ ನೋಡುತ್ತಿದ್ದಾರೆ, ರಾಮಾಯಣ-ಮಹಾಭಾರತಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಆದ್ದರಿಂದ ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಇಂದಿನ ಅಗತ್ಯಗಳಲ್ಲೊಂದು; ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಬಿಲ್ಲವ ಸಮಾಜ. ಹಿಂದೂ ಸಮಾಜವನ್ನು ಪುಡಿಗೈಯಲು ಮತಾಂತರ, ಭಯೋತ್ಪಾದನೆ ಮೊದಲಾದ ಕ್ರೂರ ಚಟುವಟಿಕೆಗಳು ನಡೆಯುತ್ತಿವೆ. ಹಿಂದುಗಳು ಅವುಗಳ ವಿರುದ್ಧ ಹೋರಾಡಬೇಕಾಗಿದೆ” ಎಂಬಿತ್ಯಾದಿ ಉಪಯುಕ್ತ ಚಿಂತನೆಗಳು ಆಗ ಮೂಡಿ ಬಂದವು.
ಬ್ರಹ್ಮಾನಂದ ಸರಸ್ವತಿಗಳ ಸಂದೇಶ
“ಜ್ಞಾನದ ಬೆಳಕಿನಲ್ಲಿ ನಾವೆಲ್ಲರೂ ಸಾಗಬೇಕಾಗಿದೆ, ‘ಭಾರತ’ ಎಂಬ ಶಬ್ದಕ್ಕಿರುವ ಅರ್ಥವೂ ಅದೇ ಆಗಿದೆ. ಸದ್ವಿಚಾರಗಳ ಚಿಂತನ ಮಂಥನ ನಡೆಯಬೇಕಾಗಿದೆ. ಎಲ್ಲ ದಿಕ್ಕುಗಳಿಂದಲೂ ಸದ್ವಿಚಾರಗಳು ನಮ್ಮತ್ತ ಹರಿದುಬರಲಿ (ಆ ನೋ ಭದ್ರಾಃ ಕ್ರತವೋಯಂತು ವಿಶ್ವತಃ) ಎಂಬುದು ಋಗ್ವೇದದ ಸಂದೇಶಗಳಲ್ಲೊಂದಾಗಿದೆ. ಸದ್‌ಗ್ರಂಥಗಳ ಸ್ವಾಧ್ಯಾಯ ನಿರಂತರವೂ ನಡೆಯಬೇಕಾಗಿದೆ. ಆತ್ಮಾನಂದ ಸರಸ್ವತಿಗಳು ತೋರಿಸಿಕೊಟ್ಟಿರುವ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ” “ಬ್ರಹ್ಮ ಸತ್ಯ ಜಗನ್ಮಿಥ್ಯಾ ಜೀವೋಬ್ರಹ್ಮೈವ ನಾಪರಃ” ಈ ಜಗತ್ತಿನಲ್ಲಿ ಬ್ರಹ್ಮವೊಂದೇ ಸತ್ಯ. ಕಣ್ಣಿಗೆ ಕಾಣುತ್ತಿರುವ ಜಗತ್ತು ನಾಶರೂಪವಾಗಿರುವುದರಿಂದ ಅದನ್ನು ಮಿಥ್ಯಾ ಜಗತ್ತು ಎನ್ನಲಾಗಿದೆ. ಜ್ಞಾನ ಯೋಗದಲ್ಲಿ ಜೀವವನ್ನು ಬ್ರಹ್ಮವೆಂದು ಉಲ್ಲೇಖಿಸಲಾಗಿದೆ. ಪ್ರತಿಜೀವವೂ ಬ್ರಹ್ಮನ ಪ್ರತಿಸ್ವರೂಪವೇ ಆಗಿದೆ. ಈ ಜಗದ ಎಲ್ಲಾ ಜೀವರಾಶಿಗಳೂ ಬ್ರಹ್ಮದ ಪ್ರತಿರೂಪಿಗಳಾಗಿದ್ದರಿಂದ ಪ್ರತಿಯೊಂದರಲ್ಲೂ ವಿಶ್ವಪ್ರೇಮವನ್ನು ಕಾಣುವುದು ನಮ್ಮ ಧರ್ಮವಾಗಿದೆ. ಅದಕ್ಕಾಗಿ ನಾವೆಲ್ಲ ಬುದ್ಧ, ಬಸವಣ್ಣ, ನಾರಾಯಣಗುರುಗಳು ಸಾರಿದ ವಿಶ್ವಪ್ರೇಮದ, ವಿಶ್ವ ಭ್ರಾತೃತ್ವದ ಸದ್ಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ.
“ಪ್ರಚಲಿತ ಪ್ರಪಂಚದಲ್ಲಿ ಮನುಷ್ಯನು ದ್ವೇಷ, ಮಾತ್ಸರ್‍ಯ, ಅಹಂಕಾರ, ಸ್ವಜನ ಪಕ್ಷಪಾತ, ಭ್ರಷ್ಟಾಚಾರವೇ ಮೊದಲಾದ ದುರ್ಗುಣಗಳಿಂದ ಆವೃತನಾಗಿ ತನ್ನತನವನ್ನೇ ಮರೆತು ಬಿಟ್ಟಿದ್ದಾನೆ. ಜಗತ್ತು ಭಯೋತ್ಪಾದಕತೆಯ ಕರಿನೆರಳಲ್ಲಿ ನಲುಗುತ್ತಿದೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ದಾನವನಾಗುತ್ತಿದ್ದಾನೆ.”
“ಯಾವಾಗ ಮನುಷ್ಯ ಎಲ್ಲಾ ಜೀವರಾಶಿಗಳಲ್ಲಿ ತನ್ನದೇ ಪ್ರತಿರೂಪವನ್ನು ಕಾಣಲು ಪ್ರಾರಂಭಿಸುತ್ತಾನೋ ಆಗ ಎಲ್ಲಾ ಸಂಘರ್ಷಗಳಿಂದ ಮುಕ್ತನಾಗಿ, ನೀರಿನ ಗುಣ ಹೇಗೆ ತಂಪಾಗಿರುತ್ತದೋ ಹಾಗೆ, ಆತ್ಮನ ಗುಣಗಳಾದ ಶಾಂತಿ, ನೆಮ್ಮದಿ, ಪ್ರೀತಿಯ ಸ್ವರೂಪವನ್ನು ಪಡೆಯುತ್ತಾನೆ. ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ ಮಹಾತ್ಮಾಗಾಂಧೀಜಿಯವರು ಕಂಡಂತಹ ರಾಮ ರಾಜ್ಯದ ಪುನರ್‌ಪ್ರತಿಷ್ಠಾಪನೆ ಇದರಿಂದ ಸಾಧ್ಯವಾಗುತ್ತದೆ. ಅಂತಹ ಸುರಾಜ್ಯದ ಕನಸನ್ನು ನನಸು ಮಾಡುವಲ್ಲಿ ಶ್ರೀರಾಮ ಕ್ಷೇತ್ರದ ಪ್ರಭು ಶ್ರೀರಾಮಚಂದ್ರ ಹಾಗೂ ಪರಿವಾರ ದೇವತೆಗಳ ಪೂರ್ಣಾನುಗ್ರಹವಿರಲಿ. ಶುಭಂ ಭೂಯಾತ್” ಎಂದು
ಬ್ರಹ್ಮಾನಂದ ಸರಸ್ವತಿಗಳು ಪೀಠಾರೋಹಣ ಸಂದೇಶವನ್ನು ಸರ್ವರಿಗೂ ಅನುಗ್ರಹಿಸಿದರು.
ಸದ್ಗುರುಗಳ ಚಿಂತನೆಯ ಜೊತೆ ನಾವೆಲ್ಲ ಹೆಜ್ಜೆಯಿಡೋಣ
“ಇಂದು ಜಗತ್ತೆಲ್ಲವೂ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಕುಸಿತಕ್ಕೊಳಗಾಗಿ ಪರಿತಪಿಸುತ್ತಿದೆ. ಮಾನಸಿಕ ಕ್ಷೋಭೆಗೊಳಗಾದ ಪ್ರಜಾಕೋಟಿ ಭಾರತದ ಆಧ್ಯಾತ್ಮ ಪರಂಪರೆಯತ್ತ ತನ್ನ ದೃಷ್ಟಿಯನ್ನು ನೆಟ್ಟು, ಆಸೆಯ ಕಣ್ಣುಗಳಿಂದ ನೋಡುತ್ತಿದೆ. ಧರ್ಮಭೂಮಿಯೂ, ಕರ್ಮಭೂಮಿಯೂ, ಯೋಗಭೂಮಿಯೂ ಆದ ಭಾರತ ದೇಶವು ಜಗತ್ತಿನ ಆಧ್ಯಾತ್ಮಿಕ ಹಸಿವನ್ನು ತಣಿಸಬಲ್ಲ ಶಕ್ತಿಯನ್ನು ತನ್ನ ಗರ್ಭದಲ್ಲಿರಿಸಿಕೊಂಡಿದೆಯೆಂಬುದು ಎಲ್ಲರ ಅಂತರಂಗಕ್ಕೂ ತಿಳಿದಿರುವ ಸಂಗತಿಯಾಗಿದೆ. ಇಂತಹ ಕಾಲಘಟ್ಟದಲ್ಲಿ ಹಿಂದುಳಿದ ಸಮಾಜದ ಯುವ ಸನ್ಯಾಸಿಯೊಬ್ಬರು ಗುರುಪೀಠವನ್ನು ಅಲಂಕರಿಸಿರುವುದು, ಅವರಲ್ಲಿ ಜ್ಞಾನಕರ್ಮಭಕ್ತಿ ಯೋಗಗಳು ಮುಪ್ಪುರಿಗೊಂಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ, ಈಗಾಗಲೇ ಕರ್ಮಯೋಗಕ್ಕೆ ತಮ್ಮ ಕ್ರಿಯಾಶೀಲತೆಯಿಂದ ಭಾಷ್ಯ ಬರೆದು ಬ್ರಹ್ಮೀಭೂತರಾದ ನಿಷ್ಕಾಮ ಕರ್ಮಯೋಗಿ ಆತ್ಮಾನಂದ ಸರಸ್ವತಿ ಸದ್ಗುರುಗಳ ಪರಂಪರೆಯನ್ನು ತಮ್ಮ ಸಾಧನೆ ಸಿದ್ಧಿಗಳ ಬಲದಿಂದ ಸಮರ್ಥವಾಗಿ ಮುನ್ನಡೆಸಬಲ್ಲ, ಸಮಾಜವನ್ನು ಆಧ್ಯಾತ್ಮ ಚಿಂತನೆಯ ತಳಹದಿಯ ಮೇಲೆ ಭದ್ರವಾಗಿ ಕಟ್ಟಿನಿಲ್ಲಿಸಬಲ್ಲ, ‘ಸರ್ವಂ ಖಲ್ವಿದಂ ಬ್ರಹ್ಮ’ ನಿಶ್ಚಯವಾಗಿ ಇದೆಲ್ಲವೂ ಬ್ರಹ್ಮವೇ ಎಂಬ ಉಪನಿಷತ್ತಿನ ವಾಣಿಯನ್ನು ತಮ್ಮ ಆಚರಣೆಯ ಬಲದಿಂದ ಸತ್ಯವಾಗಿಸಿ, ಹಿಂದುಳಿದ ಸಮಾಜಕ್ಕೆ ದಾರಿದೀಪವಾಗಬಲ್ಲ ಬ್ರಹ್ಮಾನಂದ ಸರಸ್ವತಿ ಸದ್ಗುರುಗಳ ಚಿಂತನೆಯ ಜೊತೆ ನಾವೆಲ್ಲ ಹೆಜ್ಜೆಯಿಡೋಣ.”