About

ದಕ್ಷಿಣದ ಅಯೋಧ್ಯೆ ಶ್ರೀರಾಮಕ್ಷೇತ್ರ

ಪಾವನ ಸನ್ನಿಧಿಗಳ ಬೀಡು 

ತುಳುನಾಡು ಎಂದು ಪ್ರಸಿದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯು ಅನೇಕಾನೇಕ ಪಾವನ ಪುಣ್ಯಕ್ಷೇತ್ರಗಳಿಂದ ತುಂಬಿ ಮೆರೆಯುತ್ತಿದೆ. ಅಂತಹ ದಿವ್ಯಕ್ಷೇತ್ರಗಳಲ್ಲಿ ಬೆಳ್ತಂಗಡಿ ತಾಲೂಕಿಗೆ ಸೇರಿದ, ಧರ್ಮಸ್ಥಳ ಗ್ರಾಮದ, ಕನ್ಯಾಡಿಯ ಶ್ರೀರಾಮ ಕ್ಷೇತ್ರವೂ ಒಂದು. ಇದೀಗ ಕನ್ಯಾಡಿಯು ನಿತ್ಯಾನಂದ ನಗರವೆಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದು. ಭಕ್ತರಿಗೆ ನಿತ್ಯಾನಂದವನ್ನು ನೀಡುವ ಆಂತರಿಕ ಶಕ್ತಿಯನ್ನು ಗಳಿಸಿಕೊಂಡಿದೆ. ದಕ್ಷಿಣ ಕನ್ನಡದಲ್ಲಿ ದುರ್ಗಾಪರಮೇಶ್ವರಿಯ ಆರಾಧನೆಗೆ ಅನನ್ಯವಾದ ಪ್ರಾಶಸ್ತ್ಯ ಸಂದಾಯವಾಗಿದೆ. ಅದರ ಜೊತೆಗೆ ಗಣಪತಿಯ ಪೂಜೆಗೂ ಅಷ್ಟೇ ಪ್ರಾಶಸ್ತ್ಯ ಸಲ್ಲುತ್ತಿದೆ. ‘ಕಲೌದುರ್ಗಾವಿನಾಯಕೌ’- ಕಲಿಯುಗದಲ್ಲಿ ದುರ್ಗೆ ಮತ್ತು ವಿನಾಯಕರು ಹೆಚ್ಚಿನ ಪೂಜೆಗೆ ಪಾತ್ರರಾಗುತ್ತಾರೆ ಎಂಬ ವಾಣಿಗೆ ಅದು ತಕ್ಕುದಾಗಿಯೇ ಇದೆ. ಈ ನಡುವೆ ಶಿವನು ಮಹಾಲಿಂಗೇಶ್ವರ, ಆದಿನಾಥೇಶ್ವರ, ಚಂದ್ರೇಶ್ವರ, ಅನಂತೇಶ್ವರ, ಮಂಜುನಾಥೇಶ್ವರ ಮುಂತಾದ ನಾಮಾಂತರಗಳಿಂದಲೂ; ವಿಷ್ಣುವು ವೆಂಕಟರಮಣ, ಜನಾರ್ದನ, ವಿಷ್ಣುಮೂರ್ತಿ ಮುಂತಾದ ನಾಮಾಂತರಗಳಿಂದಲೂ ಪೂಜೆಗೊಳ್ಳುತ್ತಿದ್ದಾರೆ. ಮಹಾವಿಷ್ಣುವಿನ ಅವತಾರಗಳಲ್ಲಿ ರಾಮಾವತಾರವು ಅತ್ಯಂತ ಪ್ರಸಿದ್ಧವಾದುದು. ಆದರೆ ರಾಮದೇವರ ಅರ್ಚನೆಗೆ ಮೀಸಲಾದ ಕ್ಷೇತ್ರಗಳು ದಕ್ಷಿಣ ಕನ್ನಡದಲ್ಲಿ ವಿರಳವೆಂದೇ ಹೇಳಬೇಕು. ಅಂತಹ ವಿರಳಪಂಕ್ತಿಗೆ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರವೂ ಸೇರಿಕೊಳ್ಳುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉಜಿರೆ ಎಂಬ ಪಟ್ಟಣದ ಮೂಲಕ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ, ಧರ್ಮಸ್ಥಳಕ್ಕೆ ಮುನ್ನವೇ ಅದರ ಉಪ ಗ್ರಾಮವಾದ ನಿತ್ಯಾನಂದ ನಗರದ ರಾಮಕ್ಷೇತ್ರವು ಎದುರಾಗುತ್ತದೆ. ಮುಖ್ಯರಸ್ತೆಯ ಮಗ್ಗುಲಿನಲ್ಲಿಯೇ ತನ್ನ ಭವ್ಯತೆಯಿಂದಲೂ, ಕಲಾತ್ಮಕ ಸೌಂದರ್ಯದಿಂದಲೂ ಕಣ್ಸೆಳೆಯುವ ಶ್ರೀರಾಮ ದೇವಾಲಯವು ಗೋಚರಿಸುತ್ತದೆ. ಎರಡು ಎಕರೆಗಳಷ್ಟು ವಿಸ್ತೀರ್ಣವಿರುವ, ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ತಾಣದಲ್ಲಿ ಆ ಪುಣ್ಯ ಕ್ಷೇತ್ರವು ಅರಳಿಕೊಂಡು ತನ್ನ ಸೌರಭವನ್ನು ಸೂಸುತ್ತಿದೆ.

ಮೂರು ಅಂತಸ್ತುಗಳ ಭವ್ಯ ಕಲಾಕೃತಿ 

ಶ್ರೀರಾಮ ದೇವಾಲಯವು ಮೂರು ಅಂತಸ್ತುಗಳಿಂದ ಮೆರೆಯುತ್ತಿರುವ ಭವ್ಯ ಕಲಾಕೃತಿ. ಮೊದಲನೆಯ ಅಂತಸ್ತಿನ ಅಂದರೆ ಭೂಮಟ್ಟದ ಅಂತಸ್ತಿನಲ್ಲಿ ದೇಶೋವಿಶಾಲವಾದ ಪ್ರವಚನ ಮಂದಿರವಿದೆ. ಅದನ್ನು ಭಜನಾಮಂದಿರವಾಗಿ ಬಳಸಿಕೊಳ್ಳಲಾಗಿದೆ. ವಿಶೇಷ ಸಭೆಗಳು, ಸಮಾರಂಭಗಳು ನಡೆದಾಗ ಅದನ್ನೇ ಸಾಂಸ್ಕೃತಿಕ ರಂಗವೇದಿಕೆಯನ್ನಾಗಿಯೂ ಮಾಡಿಕೊಳ್ಳಲಾಗಿದೆ. ಆ ಅಂತಸ್ತಿನಲ್ಲಿಯೇ ವೇದಾಂತ ಪಾಠಶಾಲೆ ಹಾಗೂ ಯೋಗ ತರಬೇತಿಗಳನ್ನು ನಡೆಸಲಾಗುತ್ತಿದೆ. ಹಾಗೆನೇ ಧ್ಯಾನದ ತರಬೇತಿಗಳನ್ನು ಇಲ್ಲಿ ನಡೆಸಲಾಗುತ್ತದೆ.

ಎರಡನೆಯ ಅಂತಸ್ತು : ಸಂತತ್ರಯರ ಸನ್ನಿಧಿ

ಆ ಶ್ರೀರಾಮ ದೇವಾಲಯದ ಎರಡನೆಯ ಅಂತಸ್ತನ್ನು ಮುಟ್ಟಲು ಮುಖ್ಯರಸ್ತೆಗೆ ಹೊಂದಿಕೊಂಡಂತೆಯೇ ಇರುವ, ಅಚ್ಚುಕಟ್ಟಾದ 54 ವಿಶಾಲವಾದ ಮೆಟ್ಟಿಲುಗಳನ್ನು ಏರಿಹೋಗಬೇಕು. ಅಲ್ಲಿರುವ ಪ್ರಧಾನ ಗರ್ಭಗೃಹದಲ್ಲಿ ನಿತ್ಯಾನಂದ ಸ್ವಾಮಿಗಳು, ನಾರಾಯಣ ಗುರುಗಳು ಮತ್ತು ಶಿರಡಿ ಸಾಯಿಬಾಬಾ ಎಂಬ ಮೂವರು ವಿಭೂತಿಪುರುಷರ ಕುಳಿತ ಭಂಗಿಯಲ್ಲಿರುವ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಅವರ ದರ್ಶನವಾಗುತ್ತಿದ್ದಂತೆ ಜಾತಿಮತಪಂಥಗಳ ಭೇದಭಾವಗಳು ಅಳಿದು, ಭಕ್ತರ ಮನಸ್ಸು ಸರ್ವಾತ್ಮಕನೂ, ಸರ್ವಶಕ್ತನೂ, ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೂ ಆದ, ಒಬ್ಬನೇ ಆದ ಪರಮಾತ್ಮನನ್ನು ಕಾಣಲು ಅಣಿಗೊಳ್ಳುತ್ತದೆ. ರಾಮನೆಂದರೂ ಅವನೇ, ಕೃಷ್ಣನೆಂದರೂ ಅವನೇ, ಶಿವನೆಂದರೂ ಅವನೇ, ದುರ್ಗೆಯೆಂದರೂ ಅವನೇ, ಗಣಪತಿಯೆಂದರೂ ಅವನೇ, ದತ್ತಾತ್ರೇಯನೆಂದರೂ ಅವನೇ ಎಂಬ ಚಿಂತನೆ ಸ್ಫುರಿಸುತ್ತದೆ. ನಿತ್ಯಾನಂದರಾಗಲಿ, ನಾರಾಯಣಗುರುಗಳಾಗಲಿ, ಶಿರಡಿ ಸಾಯಿಬಾಬಾರವರಾಗಲಿ ಜಾತಿಪಂಥಗಳ ಭೇದವಿಲ್ಲದೆ, ‘ದೇವನೊಬ್ಬನೇ ನಾಮ ಹಲವು’ ಎಂದು ಬೋಧಿಸುತ್ತ, ವಿಶಾಲವಾದ ತಳಹದಿಯ ಮೇಲೆ, ಸುಸಂಸ್ಕೃತ ಮಾನವ ಸಮಾಜವನ್ನು ಕಟ್ಟಲು ಹವಣಿಸಿದ ಮಹಾಚೇತನರು. ಮೊತ್ತಮೊದಲಿಗೇ ಅವರ ದರ್ಶನವಾಗುವುದು, ನಮ್ಮ ಮನಸ್ಸಿನ ಸಂಕೋಚವನ್ನು ಅಳಿಸಿಹಾಕಲು ಸಹಾಯಕವಾಗುತ್ತದೆ. ಆ ಗರ್ಭಗೃಹವು ಕಲಾತ್ಮಕವೂ, ವಿಶಾಲವೂ ಆಗಿದೆ. ಅದರ ಛಾವಣಿಯು ಶ್ವೇತಚ್ಛತ್ರದಂತೆ,  ಗುಮ್ಮಟದಂತೆ ರೂಪುಗೊಂಡಿದೆ. ಅದಕ್ಕೆ ಹೊಂದಿಕೊಂಡಂತಿರುವ ತೀರ್ಥಮಂಟಪದಲ್ಲಿಯೂ ಅದೇ ಬಗೆಯ ಗುಮ್ಮಟಾಕಾರವಿದೆ. ಅಲ್ಲಿ ನೆಲದ ಮಟ್ಟದಿಂದ ಸಾಕಷ್ಟು ಮೇಲಕ್ಕೆ ಭಿತ್ತಿಗೇ ಹೊಂದಿಕೊಂಡಂತೆ ನಾಲ್ಕು ಪುಟ್ಟ ಮಂಟಪಗಳಿವೆ. ಅಲ್ಲಿಯೂ ವಿವಿಧ ದೇವತಾಮೂರ್ತಿಗಳನ್ನು ನೆಲೆಗೊಳಿಸಿದ್ದಾರೆ.

ತೀರ್ಥಮಂಟಪದ ಎಡಬಲಗಳಲ್ಲೆಂಬಂತೆ ಎರಡು ಪ್ರತ್ಯೇಕ ಗುಡಿಗಳಲ್ಲಿ ವರಸಿದ್ಧಿವಿನಾಯಕ ದೇವರು ಮತ್ತು ಅನ್ನಪೂರ್ಣೇಶ್ವರಿಯರು ವಿರಾಜಮಾನರಾಗಿದ್ದಾರೆ. ವಿನಾಯಕನು ಕುಳಿತ ಭಂಗಿಯಲ್ಲಿದ್ದು, ಚತುರ್ಭುಜಮೂರ್ತಿಯಾಗಿದ್ದಾನೆ. ಪಾಶ, ಅಂಕುಶ, ಫಲ, ವರದಹಸ್ತನಾಗಿದ್ದಾನೆ. ಬೇಡಿದ ವರಗಳನ್ನು ಕರುಣಿಸುವ ಕರುಣಾಮೂರ್ತಿಯಾಗಿದ್ದಾನೆ. ಅನ್ನಪೂರ್ಣೇಶ್ವರಿಯಾದರೋ ಕೈಲಿ ಅನ್ನದ ಪಾತ್ರೆ ಹಿಡಿದು ಸರ್ವರ ಹಸಿವೆಯನ್ನು ನೀಗಿಸಲು ಸನ್ನದ್ಧಳಾಗಿ ಕುಳಿತಿದ್ದಾಳೆ.

ಮೂರನೆಯ ಅಂತಸ್ತು : ಪಟ್ಟಾಭಿರಾಮ ಸನ್ನಿಧಿ

ಮೂರನೆಯ ಅಂತಸ್ತು, ಆ ದೇವಾಲಯದ ಅತ್ಯಂತ ಪ್ರಮುಖವಾದ ಭಾಗ. ನಿತ್ಯಾನಂದರು, ನಾರಾಯಣಗುರುಗಳು, ಶಿರಡಿ ಸಾಯಿಬಾಬರು ತಮ್ಮ ತಲೆಯ ಮೇಲೆ ಶ್ರೀ ರಾಮದೇವರನ್ನು ಹೊತ್ತುಕೊಂಡಿದ್ದಾರೋ ಎನ್ನುವಂತೆ ಅಲ್ಲಿನ ಗರ್ಭಗೃಹದಲ್ಲಿ ಪಟ್ಟಾಭಿರಾಮದೇವನು ಸಿಂಹಾಸನಸ್ಥನಾಗಿದ್ದಾನೆ. ಎರಡನೆ ಅಂತಸ್ತಿನ ಗರ್ಭಗೃಹ, ತೀರ್ಥಮಂಟಪ, ಅದರ ಮಗ್ಗುಲಿನ ಎರಡು ಗುಡಿಗಳು ಹೇಗೆ ರೂಪುಗೊಂಡಿವೆಯೋ ಹಾಗೆಯೇ ಮೂರನೆಯ ಅಂತಸ್ತು ಕೂಡ ಅದರ ಪಡಿಯಚ್ಚು ಎಂಬಂತಿದೆ. ಪ್ರಧಾನ ಗರ್ಭಗುಡಿಯಲ್ಲಿ ಪಟ್ಟಾಭಿಷಿಕ್ತನಾದ ಶ್ರೀರಾಮಚಂದ್ರನು ತನ್ನ ಪರಿವಾರ ಸಹಿತನಾಗಿ ನೆಲೆಗೊಂಡಿದ್ದಾನೆ. ಆ ದಿವ್ಯಮಂಗಳ ಮೂರ್ತಿಯ ಒಂದು ಕೈಲಿ ಕೋದಂಡವನ್ನು ಧರಿಸಿ, ಮತ್ತೊಂದು ಕೈಯಿಂದ ಅಭಯ ನೀಡುತ್ತಿದ್ದಾನೆ. ಅವನ ಮಗ್ಗುಲಲ್ಲಿ ಸೀತಾಮಾತೆಯು ಕುಳಿತಿದ್ದಾಳೆ. ಅವಳ
ಮಂದಹಾಸಪೂರಿತ ಮುಖಮುದ್ರೆ ಅನುಪಮವಾಗಿದೆ. ಅವರ ಬೆನ್ನ ಹಿಂದೆ ನಿಂತಿದ್ದಾರೆಂಬಂತೆ ಲಕ್ಷ್ಮಣ, ಶತ್ರುಘ್ನರು ಧನುರ್ಧಾರಿಗಳೂ ಆಗಿ ಚಾಮರ ಬೀಸುತ್ತಿದ್ದಾರೆ. ರಾಮಸೀತೆಯರ ಪಾದ ಮೂಲದಲ್ಲಿ ಭರತ, ಹನುಮಂತರು ಸೇವಾನಿರತರಾಗಿದ್ದಾರೆ. ಆ ಎಲ್ಲ ಮೂರ್ತಿಗಳ ಮುಖಮಂಡಲದಿಂದ ಹೊರ ಸೂಸುತ್ತಿರುವ ಮಂದಹಾಸವು ಭಕ್ತ ಕೋಟಿಯ ಹೃನ್ಮನಗಳನ್ನು ಅಪಹರಿಸುತ್ತದೆ.

ಕೀರ್ತನೆಯಲ್ಲಿ ತನ್ಮಯನಾದ ಹನುಮಂತದೇವರು

ಈ ಗರ್ಭಗೃಹದ ತೀರ್ಥಮಂಟಪದಲ್ಲಿ ಕೂಡ ಕೆಳಗಿನ ಅಂತಸ್ತಿನಲ್ಲಿ ಹೇಗೋ ಹಾಗೆ, ಭಿತ್ತಿಗೆ ಹೊಂದಿಕೊಂಡಂತೆಯೇ ಇರುವ ನಾಲ್ಕು ಮಂಟಪಗಳಲ್ಲಿ ಬೇರೆ ಬೇರೆ ದೇವರುಗಳು ವಿರಾಜಮಾನರಾಗಿದ್ದಾರೆ. ತೀರ್ಥಮಂಟಪದ ಎಡಬಲಗಳಲ್ಲಿರುವ ಗುಡಿಗಳಲ್ಲಿ ದುರ್ಗಾಪರಮೇಶ್ವರಿ ಮತ್ತು ಕ್ಷೇತ್ರಪಾಲಗಣಪತಿಯರು ನೆಲೆಗೊಂಡಿದ್ದಾರೆ. ಶ್ರೀ ರಾಮದೇವರ ಗರ್ಭಗೃಹಕ್ಕೆ ಅಭಿಮುಖವಾಗುವಂತೆ ಅದೇ ಅಂತಸ್ತಿನಲ್ಲಿ, ಮೂರು ಬಿಡಿಬಿಡಿಯಾದ ಗುಡಿಗಳಲ್ಲಿ ಮಧ್ಯಕ್ಕೆ ಹನುಮಂತದೇವರು ಮತ್ತು ಅತ್ತಿತ್ತ ಕೃಷ್ಣ ದೇವರು ಮತ್ತು ತ್ರಿಮೂರ್ತಿ ಸ್ವರೂಪನಾದ ದತ್ತಾತ್ರೇಯ ದೇವರುಗಳಿದ್ದಾರೆ. ಹನುಮಂತ ದೇವರ ಮೂರ್ತಿಯಂತೂ ಪರಮಾದ್ಭುತವಾಗಿದೆ. ಎರಡೂ ಕೈಗಳಲ್ಲಿ ರಾಮತಾಳವನ್ನು ಹಿಡಿದು ಶ್ರೀ ರಾಮ ನಾಮ ಸಂಕೀರ್ತನೆಯಲ್ಲಿ ಅವನು ತನ್ಮಯನಾಗಿರುವ ಭಂಗಿಯು ಅಲ್ಲಿ ಭಕ್ತರನ್ನು ಭಾವಪರವಶರನ್ನಾಗಿ ಮಾಡುತ್ತದೆ.

ನವಗ್ರಹಗಳು: ನವದುರ್ಗೆಯರು

ಪಟ್ಟಾಭಿರಾಮದೇವರ ಗರ್ಭಗೃಹದ ಎಡಬಲಗಳಲ್ಲಿ ಒಂದಕ್ಕೊಂದಕ್ಕೆ ಸಮಾನಾಂತರವಾಗಿ ಅಲಂಕರಣಗೊಂಡಿರುವ ಪುಟ್ಟಪುಟ್ಟ ಗುಡಿಗಳಲ್ಲಿ ನವಗ್ರಹಗಳು, ನವದುರ್ಗೆಯರು ವಿರಾಜಮಾನರಾಗಿದ್ದಾರೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತುಗಳು ಕ್ರಮವಾಗಿ ಅಲ್ಲಿ ಸ್ಥಾನ ಪಡೆದಿದ್ದಾರೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ಎಂಬ ಹೆಸರುಗಳಿಂದ ನವದುರ್ಗೆಯರು ಭಕ್ತರನ್ನು ಕಾಪಾಡುತ್ತಿದ್ದಾರೆ.

ಪ್ರಧಾನವಾಗಿ ಆ ದೇವಾಲಯವು ರಾಮದೇವರ ಹೆಸರಿಗೆ ಅರ್ಪಿತವಾಗಿದ್ದರೂ ಅಲ್ಲಿ ಇಲ್ಲದ ದೇವರುಗಳೇ ಇಲ್ಲ. ಇಂದು ಹಿಂದೂ ಸಮಾಜದಲ್ಲಿ ಪೂಜೆಗೊಳ್ಳುತ್ತಿರುವ ಎಲ್ಲ ಮತ ಪಂಥಗಳ ದೇವರುಗಳೂ ಅಲ್ಲಿದ್ದಾರೆ. ಒಬ್ಬನೇ ದೇವರಲ್ಲಿ ಮೂವತ್ತಮೂರು ಕೋಟಿ ದೇವತೆಗಳನ್ನೂ, ಮೂವತ್ತು ಮೂರು ಕೋಟಿ ದೇವತೆಗಳಲ್ಲಿ ಒಬ್ಬನೇ ದೇವರನ್ನೂ ಕಾಣುವ ನಮ್ಮ ಸನಾತನ ಆರ್ಯ ಸಂಸ್ಕೃತಿಗೆ ಪ್ರತೀಕದಂತಿದೆ ಆ ರಾಮದೇವಾಲಯ.

ಅಮೃತಶಿಲೆಯ ವೈಭವ

ಶ್ರೀ ರಾಮದೇವಾಲಯದಲ್ಲಿ ಸ್ಥಾಪನೆಗೊಂಡಿರುವ ಎಲ್ಲ ದೇವತಾ  ಮೂರ್ತಿಗಳೂ ಹಾಲುಬಿಳುಪಿನ ಅತ್ಯುತ್ತಮ ಗುಣಮಟ್ಟದ ಅಮೃತಶಿಲೆಯಿಂದಾಗಿವೆ. ಅವೆಲ್ಲವನ್ನೂ ರಾಜಸ್ಥಾನದ ಜಯಪುರದ ಶಿಲ್ಪಕಲಾಕೋವಿದರು ನಿರ್ಮಿಸಿಕೊಟ್ಟಿದ್ದಾರೆ. ಅವುಗಳನ್ನು ಜಯಪುರದಿಂದ ಜೋಪಾನವಾಗಿ ತಂದು, ಕೂದಲೆಳೆಯಷ್ಟೂ ಮುಕ್ಕಾಗದಂತೆ ಸ್ಥಾಪನೆ ಮಾಡಿರುವ ಸಾಹಸವನ್ನು ಎಷ್ಟು ಕೊಂಡಾಡಿದರೂ ಸಾಕಾಗುವುದಿಲ್ಲ. ಭಿತ್ತಿಗಳಿಗೆ, ಸ್ತಂಭಗಳಿಗೆ, ನೆಲಕ್ಕೆ ಅಮೃತಶಿಲೆ ಹಾಗೂ ನುಣುಪಾದ ಗ್ರಾನೈಟ್ ಶಿಲೆಯ ಅಲಂಕಾರವನ್ನು ಹಸನಾಗಿ ಮಾಡಿ ಕೃತಾರ್ಥರಾಗಿದ್ದಾರೆ.

ದೇವಾಲಯದ ಹೊರಗೋಡೆಯ ಮೇಲೂ ಅನೇಕಾನೇಕ ದೇವದೇವಿಯರ ಕಲಾತ್ಮಕವೂ, ಭಕ್ತಿಪೋಷಕವೂ ಆದ ಸುಂದರ ವಿಗ್ರಹಗಳಿವೆ. ಅವುಗಳನ್ನು ಗಾರೆ, ಸಿಮೆಂಟು ಮುಂತಾದ ದ್ರವ್ಯಗಳಿಂದ ಮಾಡಿದ್ದಾರೆ. ಸುತ್ತಲೂ ಸುಂದರವಾದ ಪುಷ್ಪೋದ್ಯಾನವಿದೆ. ಆ ಪುಷ್ಪೋದ್ಯಾನದ ತಂಪಾದ ತಾಣವೊಂದರಲ್ಲಿ ನಾಗದೇವರ ಬನವಿದೆ. ಮೊದಲ ೫೪ ಮೆಟ್ಟಿಲುಗಳನ್ನು ಏರಿಹೋಗುವಾಗ ಮಗ್ಗುಲಲ್ಲೇ ಪಾವನ ಗಂಗೆಯು ಮೇಲಿನಿಂದ ಜುಳುಜುಳನೆ ಹರಿದು ಬಂದು, ಆ ದೇವಾಲಯದ ಮುಂಭಾಗದಲ್ಲೇ ಸಾಗುತ್ತಾಳೆ. ಭಕ್ತರು ಆ ಪುಣ್ಯ ಜಳದಲ್ಲಿಯೇ ಕೈಕಾಲು ತೊಳೆದು ಒಳಕ್ಕೆ ಬರುವ ವ್ಯವಸ್ಥೆ ವಿಶಿಷ್ಟವಾದುದು. ದೇವಾಲಯದ ಎದುರಿನ ಕೊಳದ ಬಳಿ ಧ್ಯಾನಮುದ್ರೆಯಲ್ಲಿರುವ ಬುದ್ಧದೇವನ ಮೂರ್ತಿಯನ್ನು ಸ್ಥಾಪಿಸಿರುವುದು ಕ್ಷೇತ್ರಕ್ಕೆ ಪೂಜ್ಯತೆಯನ್ನು ತಂದುಕೊಟ್ಟಿದೆ.

ನೂರು ದೇವಾಲಯಗಳ ಮಹೋನ್ನತಿ ಒಂದೇ ದೇವಾಲಯಕ್ಕೆ ಇಳಿದು ಬಂದಂತೆ ಭಾಸವಾಗುತ್ತದೆ ಅಲ್ಲಿನ ಶಿಲ್ಪಕಲಾವೈಭವ. ಅಲ್ಲಿನ ಬಾಗಿಲುಗಳಿಗೆ ಮಾಡಿರುವ ಕಾಷ್ಠಶಿಲ್ಪ ರಚನೆಯೂ ಮನೋಜ್ಞವಾಗಿದೆ. ಅಲ್ಲಿನ ನಯನ ಮನೋಹರವಾದ ಮೂರ್ತಿಗಳನ್ನೂ, ಅವುಗಳ ಭವ್ಯತೆಯನ್ನೂ, ಅವುಗಳ ಕಲಾ ಪ್ರಪೂರ್ಣತೆಯನ್ನೂ, ನೋಡುತ್ತಿದ್ದರೆ, ನಾವು ಲೋಕವನ್ನೇ ಮರೆತು ಭಕ್ತಿಭಾವದಲ್ಲಿ ಕರಗಿ ಹೋಗುತ್ತೇವೆ. ಎಲ್ಲ ದೇವರುಗಳನ್ನೂ ತಕ್ಕಷ್ಟು ವಿವರವಾಗಿ ನೋಡಬೇಕೆಂದು ಬಯಸಿದರೆ ಒಂದು ಗಂಟೆಯಷ್ಟು ಕಾಲವಾದರೂ ಬೇಕು.

ಕೋಟಿ ಕೋಟಿ ಕೈಗಳು

ರಾಮದೇವಾಲಯದ ನಿರ್ಮಾಣಕಾರ್ಯವು 1989 ರ ಸುಮಾರಿನಲ್ಲಿ ಪ್ರಾರಂಭವಾಗಿ 2006 ರಲ್ಲಿ ಮುಕ್ತಾಯಗೊಂಡಿದೆ. ಎಷ್ಟು ಜನ ಕೆಲಸಗಾರರು ಅದರ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾದರು ಎಂಬುದನ್ನು ಲೆಕ್ಕವಿಟ್ಟವರಿಲ್ಲ. ತಮಿಳುನಾಡು, ಕೇರಳ, ಆಂಧ್ರ, ರಾಜಸ್ತಾನ, ಮಹಾರಾಷ್ಟ್ರಗಳಿಂದಲೂ ಶಿಲ್ಪಿಗಳು, ಕುಶಲ ಕರ್ಮಿಗಳು ಅಲ್ಲಿಗೆ ಬಂದು ಆ ಮಹಾನ್ ನಿರ್ಮಾಣ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಶ್ರೀ ರಾಮದೇವಾಲಯವು ಶಿಲ್ಪಕಲೆಯ ದೃಷ್ಟಿಯಿಂದಲೂ ಒಂದು ಜಾಗೃತ ಕ್ಷೇತ್ರವಾಗಿದೆ. ಆ ದೇವಾಲಯಕ್ಕೆ ಬಂದವರು ತಂತಮ್ಮ ಆರಾಧ್ಯ ದೈವಗಳಿಗೆ, ಸಂತರಿಗೆ, ಬೇಕುಬೇಕಾದ ಪೂಜೆ ಸಲ್ಲಿಸಬಹುದು; ಬೇಕುಬೇಕಾದ ಸೇವೆ ಮಾಡಿಸಬಹುದು. ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡು ಕೃತಕೃತ್ಯರಾಗಿ, ಪ್ರಸನ್ನ ಮನಸ್ಕರಾಗಿ ತೆರಳಬಹುದು. ದೇವಾಲಯದ ಎಲ್ಲ ಭಾಗಗಳಿಗೂ ಪರಿಷ್ಕಾರವಾದ ಗಾಳಿ ಬೆಳಕುಗಳು ಪೂರೈಕೆಯಾಗುವಂತೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವೇ ಅಲ್ಲ, ಇಡೀ ಕನ್ನಡನಾಡಿಗೇ ಅದೊಂದು ಮುಕುಟಪ್ರಾಯವಾದ ದೇವಾಲಯವಾಗಿದೆಯೆಂದರೆ ಅತಿಶಯೋಕ್ತಿಯಲ್ಲ.