ಮೆರುಗು ನೀಡಿದ ಅದ್ದೂರಿ ಶೋಭಾಯಾತ್ರೆ

ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಆಯೋಜನೆ ಗೊಂಡಿರುವ ಧರ್ಮ ಸಂಸದ್‌ಗೆ ರವಿವಾರ ಸಂತರ ಅದ್ದೂರಿ ಮೆರವಣಿಗೆಯೊಂದಿಗೆ ಚಾಲನೆ ದೊರಕಿದೆ.

ಶೋಭಾಯಾತ್ರೆ
ರವಿವಾರ ಸಂಜೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಕ್ಷೇತ್ರದಿಂದ ಸಂತರ ಶೋಭಾಯಾತ್ರೆ ನಡೆದಿದ್ದು, ವಿವಿಧ ಗೊಂಬೆ ಬಳಗ, ಚೆಂಡೆ, ನಾಸಿಕ್‌ ಬ್ಯಾಂಡ್‌, ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗು ನೀಡಿದವು. ಜತೆಗೆ ಕನ್ಯಾಡಿ ಕ್ಷೇತ್ರದಲ್ಲಿ ಪುತ್ತೂರು ಜಗದೀಶ್‌ ಆಚಾರ್ಯ ಬಳಗದಿಂದ ಸಂಗೀತ ಕಾರ್ಯಕ್ರಮ, ರಾತ್ರಿ ಧರ್ಮ ಸಂಸದ್‌ನ ನಿರ್ಣಯಗಳ ಕುರಿತು ಸಂತರ ಬೈಠಕ್‌ ನಡೆಯಿತು.

ಸೋಮವಾರ ಬೆಳಗ್ಗೆ 10.30ಕ್ಕೆ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಧರ್ಮ ಸಂಸದ್‌ ಉದ್ಘಾಟಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಕಾಶ್‌ ಜಾಬ್ಡೇಕರ್‌, ಡಿ.ವಿ. ಸದಾನಂದ ಗೌಡ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ಸಂಸದರಾದ ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಅಧಿಕಾರಿ ಡಾ| ಎಸ್‌ .ಸಿ. ಶರ್ಮಾ ಮೊದಲಾದವರು ಭಾಗವಹಿಸಲಿದ್ದಾರೆ.