ಹಸಿರು ಹೊರೆಕಾಣಿಕೆ ಬೃಹತ್‌ ಮೆರವಣಿಗೆ

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೆ. 2 ಮತ್ತು 3ರಂದು ನಡೆಯುವ ಧರ್ಮಸಂಸದ್‌-2018ಕ್ಕೆ ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ಸಂಗ್ರಹಿಸಿದ ಹಸುರು ಹೊರೆಕಾಣಿಕೆಯ ಬೃಹತ್‌ ಮೆರವಣಿಗೆ ಗುರುವಾರ ಇಲ್ಲಿನ ಸಂತೆಕಟ್ಟೆಯ ಶ್ರೀ ಅಯ್ಯಪ್ಪ ಗುಡಿಯ ಬಳಿಯಿಂದ ಕನ್ಯಾಡಿ ಕ್ಷೇತ್ರಕ್ಕೆ ಸಾಗಿತು.

ಆರಂಭದಲ್ಲಿ ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್‌ ಗರೋಡಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಹರೀಶ್‌ ಪೂಂಜ, ಕಾರ್ಯ ನಿರ್ವಾಹಕ ಸಮಿತಿಯ ಸಹಸಂಚಾಲಕ ಶರತ್‌ಕೃಷ್ಣ ಪಡ್ವೆಟ್ನಾಯ, ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಜಯಂತ್‌ ಕೋಟ್ಯಾನ್‌ ತೆಂಗಿನಕಾಯಿ ಒಡೆದರು.

ಧರ್ಮ ಸಂಸದ್‌ ವ್ಯವಸ್ಥಾಪನ ಸಮಿತಿಯ ಪ್ರಧಾನ ಸಂಚಾಲಕ ಸತ್ಯಜಿತ್‌ ಸುರತ್ಕಲ್‌, ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಅಭಿನಂದನ್‌ ಹರೀಶ್‌, ಕಾರ್ಯ ನಿರ್ವಾಹಕ ಸಮಿತಿಯ ಕಾರ್ಯಾಧ್ಯಕ್ಷ ಕೆ.ಪ್ರತಾಪ್‌ಸಿಂಹ ನಾಯಕ್‌, ಪ್ರ. ಸಂಚಾಲಕ ಸಂಪತ್‌ ಬಿ. ಸುವರ್ಣ, ಪ್ರ. ಕಾರ್ಯದರ್ಶಿ ಭಗೀರಥ ಜಿ., ಪ್ರಮುಖರಾದ ಯೋಗೀಶ್‌ ಕುಮಾರ್‌ ಕೆ.ಎಸ್‌., ಸದಾನಂದ ಪೂಜಾರಿ ಉಂಗಿಲಬೈಲು, ಸೀತಾರಾಮ ಬಿ.ಎಸ್‌., ಕೆ. ಶೈಲೇಶ್‌ಕುಮಾರ್‌, ಪ್ರಶಾಂತ್‌ ಪ್ರತಿಮಾ ನಿಲಯ, ಸಂತೋಷ್‌ಕುಮಾರ್‌ ಕಾಪಿನಡ್ಕ, ನಿತ್ಯಾನಂದ ನಾವರ, ರವಿ ಬರಮೇಲು ಮೊದಲಾದವರು ಉಪಸ್ಥಿತರಿದ್ದರು.

ನೂರಾರು ವಾಹನ
ಬ್ಯಾಂಡ್‌-ವಾಲಗದ ಮೂಲಕ ಸುಮಾರು 50ಕ್ಕೂ ಹೆಚ್ಚು ವಾಹನಗಳು ಸಂತೆಕಟ್ಟೆಯಿಂದ ಹೊರಟವು. ಕೃಷಿಕರು ಸಹಿತ ಭಕ್ತರು ನೀಡಿದ ಅಕ್ಕಿ, ತೆಂಗಿನ ಕಾಯಿ, ಬಾಳೆಗೊನೆ, ಬಾಳೆ ಎಲೆ, ತರಕಾರಿ, ಎಣ್ಣೆ ಮೊದಲಾದ ವಸ್ತುಗಳನ್ನು ಹೊರೆಕಾಣಿಕೆಯಾಗಿ ಅರ್ಪಿ ಸಲಾಯಿತು. ಉಜಿರೆ ಸುತ್ತ ಮುತ್ತಲ ಗ್ರಾಮದಿಂದ ಸಂಗ್ರಹಗೊಂಡ ಹೊರೆಕಾಣಿಕೆಯನ್ನು ನೂರಾರು ವಾಹನಗಳು ಬೆಂಬಲಿಸಿದವು.