ಸೆ. 2, 3: ಕನ್ಯಾಡಿಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ರಾಷ್ಟ್ರೀಯ ಧರ್ಮ ಸಂಸದ್
ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೆ. 2 ಮತ್ತು 3ರಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ರಾಷ್ಟ್ರೀಯ ಧರ್ಮ ಸಂಸದ್ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸುವುದಕ್ಕೆ ಕನ್ಯಾಡಿ ಕ್ಷೇತ್ರ ಸಂಪೂರ್ಣವಾಗಿ ಸಿಂಗಾರಗೊಂಡಿದೆ. ಸೆ. 2ರಂದು ಅಪರಾಹ್ನ 4ಕ್ಕೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿಯಿಂದ ಸಂತರ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಪೂರ್ಣ ರೀತಿಯ ಸಿದ್ಧತೆಗಳು ನಡೆದಿವೆ. 2 ದಿನಗಳ ಈ ಕಾರ್ಯದಲ್ಲಿ ಭಾಗವಹಿಸುವ ಸಂತರು, ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮಂಗಳೂರು, ಮತ್ತಿತರ ಕಡೆಗಳಿಂದ ಚಾರ್ಮಾಡಿ ಘಾಟಿ ಮೂಲಕ ಆಗಮಿಸುವ ಭಕ್ತರಿಗೆ ಉಜಿರೆಯಿಂದ ಬಂಟಿಂಗ್ಸ್ ಅಳವಡಿಸಲಾಗಿದೆ. ಕನ್ಯಾಡಿ ಕ್ಷೇತ್ರದ ಮುಂಭಾಗ ಸಂಪೂರ್ಣವಾಗಿ ಕೇಸರಿ ಮಯವಾಗಿವಿದ್ದು, ಬಂಟಿಂಗ್ಸ್‌ಗಳಿಂದ ರಾರಾಜಿಸುತ್ತಿದೆ. ಶ್ರೀರಾಮ ಕ್ಷೇತ್ರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎಡಬದಿಯಲ್ಲಿ ಧರ್ಮ ಸಂಸದ್‌ನ ಸಭಾ ಕಾರ್ಯಕ್ರಮ ಜರಗಲಿದ್ದು, ಅದಕ್ಕಾಗಿ ವಿಶಾಲ ವೇದಿಕೆ, ಸಭಾಂಗಣ ನಿರ್ಮಾಣಗೊಂಡಿದೆ. ಇಲ್ಲಿ ಸುಮಾರು 15 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಈ ಸಭಾಂಗಣವನ್ನೂ ಸಿಂಗರಿಸಲಾಗಿದ್ದು, ಬಿಳಿ ಹಾಗೂ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿದೆ.
ಕ್ಷೇತ್ರವನ್ನು ಸಂಪೂರ್ಣ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಆಗಮಿಸುವವರನ್ನು ಸತ್ಕರಿಸುವುದಕ್ಕೆ ಕ್ಷೇತ್ರದ ವಿವಿಧ ಸಮಿತಿಗಳು, ಸ್ವಯಂಸೇವಕರು ಕೂಡ ಪೂರ್ಣ ರೀತಿಯಲ್ಲಿ ಸಜ್ಜಾಗಿದ್ದಾರೆ. ಪಾರ್ಕಿಂಗ್, ಅನ್ನದಾನ ಹೀಗೆ ಎಲ್ಲವನ್ನೂ ಅಚ್ಚುಕಟ್ಟುಗೊಳಿಸಲಾಗಿದೆ. ರವಿವಾರ ಶೋಭಾಯಾತ್ರೆ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಸಾಗಿ ಬರಲಿದ್ದು, ಕನ್ಯಾಡಿ ಕ್ಷೇತ್ರವನ್ನು ತಲುಪಿದ ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ನಡೆಯಲಿದೆ.
ಶೋಭಾಯಾತ್ರೆ
ಧರ್ಮ ಸಂಸದ್‌ನ ವಿಶೇಷತೆ ಎಂಬಂತೆ ಸಂತರ ಅದ್ದೂರಿಯ ಶೋಭಾಯಾತ್ರೆ ನಡೆಯಲಿದ್ದು, ಇದರಲ್ಲಿ ಸಂತರು ಪಾದಯಾತ್ರೆಯ ಮೂಲಕ ಉಜಿರೆಯಿಂದ ಕನ್ಯಾಡಿಗೆ ತೆರಳಿದ್ದಾರೆ. ಕಲ್ಲಡ್ಕದ ಗೊಂಬೆ ಬಳಗ, ನಾಸಿಕ್ ಬ್ಯಾಂಡ್, ಉಡುಪಿಯ ಚೆಂಡೆ ಬಳಗ, ಡೊಳ್ಳು ಕುಣಿತ, ರಾಮನ ಮೂರ್ತಿ, ಸಿಂಗಾರಿ ಮೇಳ, ವೇದಘೋಷ, ದೇವರ ಕುಣಿತ, ದಾಸಯ್ಯನವರು, ಬ್ಯಾಂಡ್‌ಸೆಟ್, ಆಲಂಕಾರಿಕ ಕೊಡೆಗಳು, ಕಲಶ ಹಿಡಿದ ಮಹಿಳೆಯರು, ನಾಗಸ್ವರ, ವಿವಿಧ ಟ್ಯಾಬ್ಲೋಗಳು ಈ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಲಿವೆ.